
ನವದೆಹಲಿ: ಕೇಂದ್ರ ಸರ್ಕಾರದ ಬಹು ಉದ್ದೇಶಿತ ಯೂನಿಕ್ ಐಡಿ ಕಾರ್ಡ್ ಆಧಾರ್ ಅನ್ನು ಎಲ್ಲ ಬಗೆಯ ಸರ್ಕಾರಿ ಸೇವೆಗಳಿಗೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಎಲ್ಲ ಸಬ್ಸಿಡಿ ಮತ್ತು ಲಾಭಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಅದರಂತೆ ಸರ್ಕಾರಿ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದ್ದರೂ, ಆಧಾರ್ ಕಾರ್ಡ್ ಇಲ್ಲದವರಿಗೆ ಗ್ಯಾಸ್ ಸಂಸ್ಥೆಗಳಂತಹ ಯಾವುದೇ ಸಂಸ್ಥೆಗಳಲಾಗಲಿ ಸಬ್ಸಿಡಿ ನಿರಾಕರಿಸುವಂತಿಲ್ಲ. ಬದಲಿಗೆ ಆಧಾರ್ ಕಾರ್ಡ್ ಇಲ್ಲದವರು ಕಾರ್ಡ್ ಗಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಇದು ಆ ಸಂಸ್ಥೆಯ ಕರ್ತವ್ಯ ಎಂದು ನೂತನ ನಿಯಮಾವಳಿಗಳಲ್ಲಿ ಉಲ್ಲೇಖಿಸಲಾಗಿದೆ.
ಅಂತೆಯೇ ಅರ್ಹರು ಸಬ್ಸಿಡಿಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದೂ ಕೂಡ ಈ ಸಂಸ್ಥೆಗಳ ಹೊಣೆಗಾರಿಕೆಯಾಗಿದ್ದು, ಆಧಾರ್ ಸಂಖ್ಯೆ ಯಾವ ಯೋಜನೆಗೆ ಅಗತ್ಯ ಎಂಬುದನ್ನೂ ಸಚಿವಾಲಯಗಳೇ ಘೋಷಿಸಬೇಕು ಎಂದು ಯುಐಡಿ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ. ಇದೇ ವೇಳೆ ಆಧಾರ್ ಕಾರ್ಡ್ ಗಳ ದುರ್ಬಳಕೆ ಕುರಿತು ಮಾತನಾಡಿದ ಪಾಂಡೆ, ದುರ್ಬಳಕೆ ಮಾಡಿಕೊಂಡ ಕುರಿತು ಮಾಹಿತಿ ತಿಳಿದುಬಂದಲ್ಲಿ ಸಂಬಂಧ ಪಟ್ಟ ವ್ಯಕ್ತಿಗೆ ಕನಿಷ್ಠ 3 ವರ್ಷಗಳ ಸೆರೆವಾಸ ವಿಧಿಸುವ ಕಾನೂನು ಕೂಡ ಇದೆ ಎಂದು ಹೇಳಿದ್ದಾರೆ.
ಈ ಹಿಂದೆ ಎಲ್ ಪಿಜಿ ಸಬ್ಸಿಡಿ ಸೌಲಭ್ಯಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಅಲ್ಲದೆ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಮಾಹಿತಿ ನೀಡಬೇಕೇ ಹೊರತು ಅದು ಕಡ್ಡಾಯವೇನಲ್ಲ ಎಂದು ಹೇಳಿತ್ತು.
Advertisement