ಬುರ್ಹಾನ್ ವಾನಿ ಎಫೆಕ್ಟ್; ಹಿಜ್ಬುಲ್ ಸಂಘಟನೆ ಸೇರುತ್ತಿರುವ ನೂರಾರು ಕಾಶ್ಮೀರ ಯುವಕರು!

ಹಿಜ್ಬುಲ್ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಕಾಶ್ಮೀರ ಹಿಂಸಾಚಾರ ಪ್ರಸ್ತುತ ತಹಬದಿಗೆ ಬಂದಿದ್ದು, ಯುವಕರಿಂದ ಕಲ್ಲು ತೂರಾಟ ನಿಂತಿದೆ. ಆದರೆ ಕಲ್ಲು ತೂರುತ್ತಿದ್ದು ಯುವಕರು ಇನ್ನು ಮುಂದೆ ಗುಂಡು ಹಾರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರ ಬುಹ್ರಾನ್ ವಾನಿ ಹಾಗೂ ಉಗ್ರ ತರಬೇತಿ (ಸಂಗ್ರಹ ಚಿತ್ರ)
ಉಗ್ರ ಬುಹ್ರಾನ್ ವಾನಿ ಹಾಗೂ ಉಗ್ರ ತರಬೇತಿ (ಸಂಗ್ರಹ ಚಿತ್ರ)

ಶ್ರೀನಗರ: ಹಿಜ್ಬುಲ್ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಕಾಶ್ಮೀರ ಹಿಂಸಾಚಾರ ಪ್ರಸ್ತುತ ತಹಬದಿಗೆ ಬಂದಿದ್ದು, ಯುವಕರಿಂದ ಕಲ್ಲು ತೂರಾಟ ನಿಂತಿದೆ. ಆದರೆ  ಕಲ್ಲು ತೂರುತ್ತಿದ್ದು ಯುವಕರು ಇನ್ನು ಮುಂದೆ ಗುಂಡು ಹಾರಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಸೇನೆಯ ಹಿರಿಯ ಅಧಿಕಾರಿ ಅತುಲ್ ಕರ್ವಾಲ್ ಅವರು ತಿಳಿಸಿರುವಂತೆ ಕುಖ್ಯಾತ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ತನ್ನ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ  ವಿಚಾರವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದು, ಬುರ್ಹಾನ್ ವಾನಿ ಹೆಸರಲ್ಲಿ ಭಾರತೀಯ ಸೇನೆಯ ವಿರುದ್ಧ ದಂಗೇಳಲು ಕಾಶ್ಮೀರಿ ಯುವಕರ ಕೈಗೆ ಬಂದೂಕುಗಳನ್ನು ನೀಡುತ್ತಿದೆ ಎಂದು  ಹೇಳಿದ್ದಾರೆ.

ಅವರ ಗಮನಕ್ಕೆ ಬಂದಂತೆ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರ ವಲಯದಲ್ಲಿ ಆತನ ಬಗ್ಗೆ ಉಂಟಾಗಿರುವ ಸಹಾನುಭೂತಿಯನ್ನು ಹಿಜ್ಬುಲ್ ಸಂಘಟನೆ ತನ್ನ ಏಳಿಗೆಗಾಗಿ ಬಳಸಿಕೊಳ್ಳುತ್ತಿದ್ದು,  ವಾನಿ ಹೆಸರನ್ನು ಮುಂದಿಟ್ಟುಕೊಂಡು ಕಾಶ್ಮೀರದ ನೂರಾರು ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುತ್ತಿದೆಯಂತೆ. ಈಗಾಗೇಲ ಮೊದಲ ಹಂತದ ಉಗ್ರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು,  ಅವರಿಗೆ ತರಬೇತಿ ನೀಡಲಾಗುತ್ತಿದೆಯಂತೆ. 2ನೇ ಹಂತದ ನೇಮಕಾತಿ ಪ್ರಕ್ರಿಯೆ ಪ್ರಗತಿಯ ಹಂತದಲ್ಲಿದ್ದು, ಇದಕ್ಕೆ ಭಾರತೀಯ ಸೇನೆಯ ಸೈನಿಕರು ತೊಡಕಾಗಿ ನಿಂತಿದ್ದಾರೆ. ಹೀಗಾಗಿ ಅವರ  ಮೇಲೆ ಕಲ್ಲೂ ತೂರಾಟ ಮಾಡುವ ಮೂಲಕ ಸೈನಿಕರೆಲ್ಲರೂ ಹಿಂಸಾಚಾರ ನಿಯಂತ್ರಣದಲ್ಲಿ ತೊಡಗಿದ್ದರೆ ಹಿಜ್ಬುಲ್ ಸಂಘಟನೆ ಮಾತ್ರ ಗೌಪ್ಯವಾಗಿ ಕಾಶ್ಮೀರದಲ್ಲಿ ನೇಮಕಾತಿ ನಡೆಸುತ್ತಿದೆ  ಎಂದು ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕೂಡ ಸ್ಪಷ್ಟನೆ ನೀಡಿದ್ದು, ಕಾಶ್ಮೀರ ಕಣಿವೆಯಿಂದ ಹೊರ ಹೋಗಿರುವ ಮತ್ತು ಒಳ ಬಂದಿರುವ ಕೆಲ ದೂರವಾಣಿ ಕರೆಗಳ ಮಾಹಿತಿ  ಕಲೆಹಾಕಲಾಗಿದ್ದು, ಈ ಕರೆಗಳ ಪೈಕಿ ಕೆಲವು ಕರೆಗಳು ಹಿಜ್ಬುಲ್ ಸಂಘಟನೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದೆ. ಕರೆಗಳ ಆಧಾರದ ಮೇರೆಗೆ ಬುರ್ಹಾನ್ ವಾನಿ ಹತ್ಯೆ  ಬಳಿಕ ಕಾಶ್ಮೀರದಲ್ಲಿ ಈ ವರೆಗೂ ಸುಮಾರು 150 ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ ಈ ಯುವಕರಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ತರಬೇತಿ  ನೀಡಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ನನ್ನ ಹೆಸರು ಬುರ್ಹಾನ್ ವಾನಿ
ಇನ್ನು ಕಾಶ್ಮೀರ ಹಿಂಸಾಚಾರದ ವೇಳೆ ಗಾಯಗೊಂಡ ಯುವಕರು ಆಸ್ಪತ್ರೆಗೆ ದಾಖಲಾದಾಗ ಸಿಬ್ಬಂದಿಗಳು ಅವರ ಹೆಸರು ಕೇಳಿದ್ದಾರೆ. ಈ ವೇಳೆ ಬಹುತೇಕ ಯುವಕರು ತನ್ನ ಹೆಸರು ಬುರ್ಹಾನ್  ವಾನಿ ಎಂದು ಹೇಳಿದ್ದಾರೆ. ಉಗ್ರ ಸಂಘಟನೆಗಳು ಅಷ್ಟರ ಮಟ್ಟಿಗೆ ಯುವಕರ ತಲೆ ಕೆಡಿಸಿದ್ದು, ಯುವಕರೆಲ್ಲರೂ ತಮ್ಮ ಹೆಸರನ್ನು ಬುರ್ಹಾನ್ ವಾನಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರಂತೆ.

ಒಟ್ಟಾರೆ ಉಗ್ರ ಬುರ್ಹಾನ್ ವಾನಿ ಹತ್ಯೆಯನ್ನು ಹಿಜ್ಬುಲ್ ಸಂಘಟನೆ ತನ್ನ ಕುಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದು, ಇದಕ್ಕೆ ಕಾಶ್ಮೀರದ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com