

ನವದೆಹಲಿ: ಕಾಶ್ಮೀರದಲ್ಲಿ ಪಾಕಿಸ್ತಾನ ಹರಡುತ್ತಿರುವ ಕೋಮುವಾದವನ್ನು ಇಲ್ಲಿನ ಯಾವುದೇ ಪ್ರಜಾಸತ್ತಾತ್ಮಕ, ಜಾತ್ಯಾತೀತ, ರಾಷ್ಟ್ರೀಯವಾದಿ ಕಾಶ್ಮೀರಿಗಳು ಒಪ್ಪುವುದಿಲ್ಲ, ಕಾಶ್ಮೀರ ಎಂದಿಗೂ ಪಾಕಿಸ್ತಾನದ ಭಾಗವಾಗಲು ಸಾಧ್ಯವಿಲ್ಲ ಎಂದು ಯುನೈಟೆಡ್ ಕಾಶ್ಮೀರ್ ಪೀಪಲ್ಸ್ ನ್ಯಾಷನಲ್ ಪಕ್ಷದ(ಯುಕೆಪಿಎನ್) ಯ ನಾಯಕ ಶೌಕತ್ ಅಲಿ ಹೇಳಿದ್ದಾರೆ. .
ಪಾಕಿಸ್ತಾನದ ಭಯೋತ್ಪಾದಕ ಹಫೀಜ್ ಸಯೀದ್ ನ ಕಾಶ್ಮೀರ ಪಾಕಿಸ್ತಾನದ ಭಾಗವಾಗುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶೌಕತ್ ಅಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಹೇರುತ್ತಿರುವ ಕೋಮುವಾದವನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಅದು ಪಾಕಿಸ್ತಾನದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೆ ವೇಳೆ ಭಾರತ ಸರ್ಕಾರಕ್ಕೆ ಮನವಿ ಮಾಡಿರುವ ಶೌಕತ್ ಅಲಿ, ಭಾರತ ಸರ್ಕಾರ ಕಾಶ್ಮೀರದಲ್ಲಿರುವ ಪ್ರಜಾಸತ್ತಾತ್ಮಕ, ರಾಷ್ಟ್ರೀಯ ಹಾಗೂ ಜಾತ್ಯಾತೀತವಾದಿಗಳ ಧ್ವನಿಗೆ ಸ್ಪಂದಿಸಬೇಕು, ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿಕೊಳ್ಳುವವರೆಗೂ ಆ ದೇಶವನ್ನು ವಿಶ್ವಾದ್ಯಂತ ಇರುವ ರಾಷ್ಟ್ರೀಯವಾದಿಗಳು ಬಹಿಷ್ಕರಿಸಬೇಕು ಎಂದು ಶೌಕತ್ ಅಲಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕಾಶ್ಮೀರ ಪ್ರದೇಶಕ್ಕೆ ಸಂಬಂಧಿಸಿದಂತೆ ಮಾನವಹಕ್ಕುಗಳ ಬಗ್ಗೆ ಪ್ರಸ್ತಾಪಿಸುತ್ತಿರುವ ಪಾಕಿಸ್ತಾನಕ್ಕೆ ತಿರುಗೇಟು ನೀಡಿರುವ ಶೌಕತ್ ಅಲಿ, ಪಾಕಿಸ್ತಾನ ಯಾವ ಮುಖ ಇಟ್ಟುಕೊಂಡು ಪಾಕಿಸ್ತಾನ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದೆ. ಪಾಕಿಸ್ತಾನದ ಸುಳ್ಳುಗಳನ್ನು ಕೇಳಲು ವಿಶ್ವ ಸಮುದಾಯದವರು ಮೂರ್ಖರಲ್ಲ. ಕಾಶ್ಮೀರ ಸಮಸ್ಯೆ ಉಂಟಾದಾಗಿನಿಂದಲೂ ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದಾರೆ. ಯುಕೆಪಿಎನ್ ಪಿ ಜಮ್ಮು-ಕಾಶ್ಮೀರದ ಸ್ವಾಯತ್ತತೆಗೆ ಬೆಂಬಲಿಸುತ್ತಿರುವ ಪಕ್ಷವಾಗಿದೆ. ಆದರೆ ಪ್ರಜಾಪ್ರಭುತ್ವ, ಜಾತ್ಯಾತೀತತೆಗೆ ಬದ್ಧವಾಗಿರುವುದಾಗಿ ಘೋಷಿಸಿಒಕೊಂಡಿದ್ದು, ಧಾರ್ಮಾಧಾರಿತ ಪ್ರಾಂತ್ಯವಾಗಲು ವಿರೋಧ ವ್ಯಕ್ತಪಡಿಸಿದೆ.