
ನವದೆಹಲಿ: ಫಿನ್ ಲ್ಯಾಂಡ್ ಪ್ರವಾಸದಲ್ಲಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೂಡಲೇ ದೆಹಲಿಗೆ ವಾಪಸ್ ಆಗಬೇಕು ಎಂದು ಸೂಚನೆ ನೀಡಿದ್ದ ಲೆಫ್ಟಿನೆಂಟ್ ಗೌರ್ನರ್ ವಿರುದ್ಧವೇ ದೆಹಲಿ ಸಚಿವರು ಗಂಭೀರ ಆರೋಪ ಮಾಡಿದ್ದಾರೆ.
ಮನೀಶ್ ಸಿಸೋಡಿಯಾ ಅವರಿಗೆ ತುರ್ತಾಗಿ ದೆಹಲಿಗೆ ಆಗಮಿಸಲು ಸೂಚನೆ ನೀಡಿ ಲೆಫ್ಟಿನೆಂಟ್ ಗೌರ್ನರ್ ಫ್ಯಾಕ್ಸ್ ಕಳಿಸಿದ ಬೆನ್ನಲ್ಲೇ, ದೆಹಲಿ ಜಲ ಸಚಿವ ಕಪಿಲ್ ಮಿಶ್ರಾ ಲೆಫ್ಟಿನೆಂಟ್ ಗೌರ್ನರ್ ನ್ನು ಭೇಟಿ ಮಾಡಲು ತೆರಳಿದ್ದಾರೆ. ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯೆ ನೀಡಿದ್ದು, ಲೆಫ್ಟನೆಂಟ್ ಗೌರ್ನರ್ ನಜೀಬ್ ಜಂಗ್ ನನ್ನನ್ನು ಹಾಗೂ ದೆಹಲಿ ಅರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
"ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಫಿನ್ ಲ್ಯಾಂಡ್ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗಂಭೀರ ಸ್ಥಿತಿ ಏನೋ ಇರಬಹುದು ಎಂದುಕೊಂಡ ನಾನು ಮತ್ತು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಲೆಫ್ಟಿನೆಂಟ್ ಗೌರ್ನರ್ ಅವರನ್ನು ಭೇಟಿ ಮಾಡಲು ಹೋದೆವು. ಆದರೆ ಲೆಫ್ಟಿನೆಂಟ್ ಗೌರ್ನರ್ ನನ್ನ ಭೇಟಿ ಮಾಡಲು ನಿರಾಕರಿಸಿದರು" ಎಂದು ಕಪಿಲ್ ಮಿಶ್ರಾ ಆರೋಪಿಸಿದ್ದಾರೆ.
ಭೇಟಿ ಮಾಡಲು ಹೋದ ವೇಳೆ ಲೆಫ್ಟಿನೆಂಟ್ ಗೌರ್ನರ್ ತಾವು ಕಚೇರಿಗೆ ಬರುತ್ತಿಲ್ಲ ಎಂದು ತಿಳಿಸಲು ಸೂಚನೆ ನೀಡಿದ್ದರು ಎಂದು ಕಪಿಲ್ ಮಿಶ್ರಾ ಆರೋಪಿಸಿದ್ದಾರೆ. ಲೆಫ್ಟಿನೆಂಟ್ ಗೌರ್ನರ್ ನಜೀಬ್ ಜಂಗ್ ಅವರ ಭೇಟಿಗೂ ಮುನ್ನ ಅನುಮತಿ ಪಡೆಯಲಾಗಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಪಿಲ್ ಮಿಶ್ರಾ, ದೆಹಲಿಯಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನುಮತಿ ಪಡೆಯುವಷ್ಟು ಸಮಯ ಇರಲಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
Advertisement