
ನವದೆಹಲಿ: ಫಿನ್ ಲ್ಯಾಂಡ್ ಪ್ರವಾಸದಲ್ಲಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೂಡಲೇ ದೆಹಲಿಗೆ ವಾಪಸ್ ಆಗಬೇಕು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ಮಿತಿ ಮೀರಿರುವ ಸಾಂಕ್ರಾಮಿಕ ರೋಗಗಳೊಂದಿಗೆ ಡೆಂಗ್ಯೂ ಹಾಗೂ ಚಿಕುನ್ ಗುನ್ಯಾ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ದೆಹಲಿ ಆರೋಗ್ಯ ಇಲಾಖೆ ವಿಫಲವಾಗುತ್ತಿದ್ದು, ಇದೇ ಕಾರಣಕ್ಕೆ ಕೂಡಲೇ ದೆಹಲಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸುವಂತೆ ನಜೀಬ್ ಜಂಗ್ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅನಾರೋಗ್ಯ ನಿಮಿತ್ತ ಶಸ್ತ್ರ ಚಿಕಿತ್ಸೆ ಒಳಗಾಗಲಿದ್ದು, ಅವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ದೆಹಲಿ ಆಡಳಿತ ಯಂತ್ರದ ಜವಾಬ್ದಾರಿ ಇದೆ. ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಶಿಕ್ಷಣಇಲಾಖೆಯ ಜವಾಬ್ದಾರಿ ಕೂಡ ಸಿಸೋಡಿಯಾ ಮೇಲಿದ್ದು, ಫಿನ್ ಲ್ಯಾಂಡ್ ಶಿಕ್ಷಣ ವ್ಯವಸ್ಥೆಯ ಕುರಿತ ಅಧ್ಯಯನಕ್ಕಾಗಿ ಅವರು ಆ ದೇಶಕ್ಕೆ ಹಾರಿದ್ದರು.
ಇದೀಗ ದೆಹಲಿಯಲ್ಲಿ ಡೆಂಗ್ಯೂ, ಚಿಕುನ್ ಗುನ್ಯಾ ಹಾವಳಿ ಮಿತಿ ಮೀರಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ವರೆಗೂ ದೆಹಲಿಯಲ್ಲಿ ಸುಮಾರು 2, 800ಕ್ಕೂ ಅಧಿಕ ಮಂದಿಯಲ್ಲಿ ರೋಗಲಕ್ಷಣಗಳು ಕಾಣಿಸಕೊಂಡಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದೇ ಕಾರಣದಿಂದಾಗಿ ವಿಫಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದು, ಒಂದೆಡೆ ದೆಹಲಿ ಜನತೆ ರೋಗಗಳಿಂದ ಬಾಧೆ ಪಡುತ್ತಿದ್ದರೆ, ಡಿಸಿಎಂ ಸಿಸೋಡಿಯಾ ಫಿನ್ ಲ್ಯಾಂಡ್ ನಲ್ಲಿ ರಜೆಪ್ರವಾಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Advertisement