
ಬೆಂಗಳೂರು: ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು ತಿಂಗಳಾಂತ್ಯಕ್ಕೆ ಸೇವೆಯಿಂದ ನಿವೃತ್ತು ಹೊಂದಲಿದ್ದು, ಹಿರಿಯ ಐಎಎಸ್ ಅಧಿಕಾರಿ ಸುಭಾಷ್ ಕುಂಟಿಯಾ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗುವ ಸಾಧ್ಯತೆ ಇದೆ.
ಮುಖ್ಯ ಕಾರ್ಯದರ್ಶಿ ವಿರುದ್ಧ ಕೇಳಿಬಂದಿರುವ ಆರೋಪಗಳಿಂದ ಎಚ್ಚೆತ್ತುಕೊಂಡಿರುವ ಸಿಎಂ ಸಿದ್ದರಾಮಯ್ಯ ಈ ಬಾರಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಜಾಗರೂಕತೆ ವಹಿಸಿದ್ದು ದಕ್ಷ ಅಧಿಕಾರಿ ಎಂದು ಗುರುತಿಸಲಾಗಿರುವ ಸುಭಾಷ್ ಕುಂಟಿಯಾ ಅವರನ್ನು ಮುಂದಿನ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯದಲ್ಲಿರುವ ಐಎಎಸ್ ಅಧಿಕಾರಿಗಳ ಪೈಕಿ ಉಪೇಂದ್ರ ತ್ರಿಪಾಠಿ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ. ಸೇವಾ ಹಿರಿತನದ ಆಧಾರದಲ್ಲಿ ಉಪೇಂದ್ರ ತ್ರಿಪಾಠಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಳ್ಳಬೇಕು. ಆದರೆ ಮುಂದಿನ ತಿಂಗಳು ಅವರು ಸೇವೆಯಿಂದ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸುಭಾಷ್ ಕುಂಟಿಯಾ ಅವರನ್ನು ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ.
ಮುಖ್ಯಕಾರ್ಯದರ್ಶಿ ಹುದ್ದೆಗೆ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾಗಿರುವ ರತ್ನ ಪ್ರಭ ಹಾಗೂ ಎಸ್ ಕೆ ಪಾಟ್ನಾಯಕ್ ಅವರ ಹೆಸರುಗಳು ಕೇಳಿಬಂದಿವೆ ಎಂಬ ವರದಿಗಳು ಪ್ರಕಟವಾಗಿದೆಯಾದರೂ, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸುಭಾಷ್ ಕುಂಟಿಯಾ ಅವರನ್ನೇ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಬೇಕೆಂದು ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಟಿಯಾ ಅವರ ಸೇವಾ ಅವಧಿ ನವೆಂಬರ್ 2017 ಕ್ಕೆ ಕೊನೆಯಾಗಲಿದೆ.
Advertisement