
ಮಂಡ್ಯ: ಶಾಸಕ ಅಂಬರೀಶ್ ಬೇಜವಾಬ್ದಾರಿ ಮನುಷ್ಯ, ಸಿಎಂ ಸಿದ್ದರಾಮಯ್ಯ ಸುಳ್ಳುಗಾರ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಟ್ಟ ಬಳಿಕ ಉದ್ವಿಗ್ನಗೊಂಡಿದ್ದ ಮಂಡ್ಯ ಜಿಲ್ಲಾ ರೈತರನ್ನು ಸಂತೈಸಲು ನಾಲೆಗಳಿಗೆ ಸರ್ಕಾರ ಬಿಡುತ್ತಿದ್ದ ನೀರು ನಿನ್ನೆಯಿಂದ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಅವರು, ಶಾಸಕ ಅಂಬರೀಶ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
"ಮಂಡ್ಯ ಜಿಲ್ಲೆ ಜನರು ಸಂಕಷ್ಟದಲ್ಲಿದ್ದರೂ ಅಂಬರೀಶ್ ಬಂದಿಲ್ಲ. ಇಂತಹ ಬೇಜವಾಬ್ದಾರಿ ಮನುಷ್ಯನ ಕುರಿತು ತಾವು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಮಾದೇಗೌಡ ಹೇಳಿದ್ದಾರೆ. ಇನ್ನು ನಾಲೆಗಳಿಗೆ ನೀರು ಹರಿಸಿ ಇದೀಗ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ. ರೈತರ ಬೆಳೆಗಳಿಗೆ ನೀರು ಬಿಡುತ್ತೇನೆ ಎಂದು ಹೇಳಿ ಇದೀಗ ನೀರು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಇನ್ನೆರಡು ದಿನದಲ್ಲಿ ತಾವು ಬೆಳೆ ನಷ್ಟ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸುತ್ತೇವೆ. ಪರಿಹಾರ ನೀಡದಿದ್ದರೆ ಖಂಡಿತವಾಗಿಯೂ ಅವರನ್ನು ಮಂಡ್ಯ ಜಿಲ್ಲೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿದ ಮಾದೇಗೌಡ ಅವರು, ಕೆಆರ್ ಎಸ್ ಜಲಾಶಯವನ್ನು ಕಟ್ಟಿರುವುದೇ ತಮಿಳುನಾಡಿಗೆ ನೀರು ಬಿಡಲು ಎಂದು ಕೆಲವರು ಭಾವಿಸಿದಂತಿದೆ. ನಮ್ಮವರಿಗೆ ಕುಡಿಯಲು ನೀರಿಲ್ಲದಿದ್ದಾಗ ನೀರು ಬಿಡಲು ಹೇಗೆ ಸಾಧ್ಯ ಎಂದು ಅವರು ಕಿಡಿಕಾರಿದ್ದಾರೆ.
Advertisement