
ನವದೆಹಲಿ: ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿಯಲ್ಲಿ ಉಗ್ರರು ಅಟ್ಟಹಾಸ ಮೆರೆದಿರುವುದು, ಪಾಕಿಸ್ತಾನ ರಾಷ್ಟ್ರವು ಕಾಶ್ಮೀರದೊಳಗೆಯೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದನ್ನು ತೋರಿಸುತ್ತದೆ ಎಂದು ರಕ್ಷಣಾ ತಜ್ಞರು ಭಾನುವಾರ ಅಭಿಪ್ರಾಯ ಪಟ್ಟಿದ್ದಾರೆ.
ಉಗ್ರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬ್ರಿಗೇಡಿಯರ್ ಅನಿಲ್ ಗುಪ್ತ( ನಿವೃತ್ತ) ಅವರು, ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಈ ನಡುವೆಯೂ ಉಗ್ರರು ಒಳನುಸುಳಿಸಿರುವುದು ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಸೇನಾ ಪ್ರಧಾನ ಕಚೇರಿವರೆಗೂ ಉಗ್ರರು ಬಂದಿರುವುದು ನಿಜಕ್ಕೂ ಉತ್ತಮವಾದ ಬೆಳವಣಿಗೆಯಲ್ಲ. ಸಂಪೂರ್ಣ ಮಾಹಿತಿ ಈ ವರೆಗೂ ಹೊರಬಿದ್ದಿಲ್ಲ. ಹೀಗಾಗಿ, ಮಾಹಿತಿ ಇಲ್ಲದೆಯೇ ಈ ಬಗ್ಗೆ ಹೆಚ್ಚಿಗೆ ಮಾತನಾಡಲು ಇಚ್ಛಿಸುವುದಿಲ್ಲ. ಪಾಕಿಸ್ತಾನ ತನ್ನ ಆಲೋಚನೆಯನ್ನು ಬದಲಿಸುತ್ತಿಲ್ಲ ಎಂಬುದಂತೂ ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಕುರಿತಂತೆ ಪಾಕಿಸ್ತಾನದ ವಿರುದ್ಧ ವಿಶ್ವದಾದ್ಯಂತ ಹಲವು ಟೀಕೆಗಳನ್ನು ವ್ಯಕ್ತವಾಗುತ್ತಿದೆ. ವಿಶ್ವದ ಟೀಕೆಗಳನ್ನು ಎದುರಿಸುತ್ತಿದ್ದರೂ ಪಾಕಿಸ್ತಾನ ಮಾತ್ರ ತನ್ನ ಆಲೋಚನೆಯನ್ನು ಬದಲಿಸುತ್ತಿಲ್ಲ. ಕಾಶ್ಮೀರದೊಳಗೆಯೇ ಪಾಕಿಸ್ತಾನ ಇಂದು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಬಿಡುವುದಿಲ್ಲ, ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರೆಯಲಿದೆ ಎಂಬ ಸಂದೇಶ ಸಾರುತ್ತಿರುವಂತಿದೆ ಎಂದು ಹೇಳಿದ್ದಾರೆ.
Advertisement