
ನವದೆಹಲಿ: ಪಾಕಿಸ್ತಾನದೊಂದಿಗೆ ಭಾರತ ಹೊಂದಿರುವ 3,323 ಕಿಮೀ ಗಡಿ ಪ್ರದೇಶದ ಭದ್ರತೆಗೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬೇಕೆಂಬ ಸಮಿತಿಯೊಂದರ ಸಲಹೆಗೆ ಭಾರತ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.
ಪಠಾಣ್ ಕೋಟ್ ವಾಯು ನೆಲೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರ ನೇತೃತ್ವದ ಸಮಿತಿ ರಚಿಸಿ, ಗಡಿಪ್ರದೇಶದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳಿಗೆ ಸಲಹೆ ನೀಡಲು ಸೂಚಿಸಿತ್ತು. ಈಗ ಮಧುಕರ್ ಗುಪ್ತ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಒಂದಷ್ಟು ಶಿಫಾರಸುಗಳನ್ನು ನೀಡಿದ್ದು, ಇವುಗಳಿಗೆ ಸರ್ಕಾರ ತಾತ್ವಿಕ ಅನುಮೋದನೆಯನ್ನೂ ನೀಡಿದೆ.
3,323 ಕಿಮೀ ಗಡಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಸಮರ್ಥವಾಗಿ ನಿಗ್ರಹಿಸಬೇಕಾದರೆ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದ್ದು, ಸ್ಮಾರ್ಟ್ ಫೆನ್ಸ್( ಸ್ಮಾರ್ಟ್ ಬೇಲಿ)ಯನ್ನು ನಿರ್ಮಿಸಬೇಕೆಂಬ ಸಲಹೆ ನೀಡಿದೆ. ಇದಕ್ಕೂ ಸಹ ಭಾರತ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಜಮ್ಮು-ಕಾಶ್ಮೀರ, ರಾಜಸ್ತಾನ, ಗುಜರಾತ್, ಪಂಜಾಬ್ ರಾಜ್ಯಗಳು ಪಾಕಿಸ್ತಾನದೊಂದಿಗೆ ಗಡಿ ಪ್ರದೇಶಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಈ ಪ್ರದೇಶಗಳಲ್ಲಿ ಸ್ಮಾರ್ಟ್ ಬೇಲಿ ನಿರ್ಮಾಣವಾಗಲಿದೆ. ಗಡಿ ಪ್ರದೇಶಗಳಲ್ಲಿ ಗ್ರಿಡ್ ಆಧಾರಿತ ವ್ಯವಸ್ಥೆ ಜಾರಿಗೆ ತರುವಂತೆಯೂ ಈ ಸಮಿತಿ ಶಿಫಾರಸ್ಸು ಮಾಡಿದ್ದು, ಶಿಫಾರಸ್ಸು ಜಾರಿಯಾದಲ್ಲಿ ಬಿಎಸ್ಎಫ್ ಯೋಧರಿಗೆ ನಾಲ್ಕು ರಾಜ್ಯಗಳ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಹೈ ಟೆಕ್ ಉಪಕರಣಗಳು ದೊರೆಯಲಿವೆ.
ಗಡಿ ಪ್ರದೇಶಗಳಲ್ಲಿ ಗ್ರಿಡ್ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಗಡಿಯೊಳಗೆ ನುಸುಳುವಿಕೆ ಕಂಡುಬಂದಲ್ಲಿ ತಕ್ಷಣವೇ, ಗ್ರಿಡ್ ಎಚ್ಚರಿಕೆ ನೀಡಲಿದ್ದು ಉಳಿದ ಗ್ರಿಡ್ ಗಳಿಗೂ ಮಾಹಿತಿ ರವಾನೆ ಮಾಡಲಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಗಡಿ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಸಿಬ್ಬಂದಿಗಳನ್ನು ನಿಯೋಜಿಸುವುದು ಸಹ ಸಮಿತಿಯ ಶಿಫಾರಸ್ಸುಗಳಲ್ಲಿ ಒಂದಾಗಿದೆ.
Advertisement