
ನವದೆಹಲಿ: ತೀವ್ರ ಬರಗಾಲದಿಂದ ನರಳುತ್ತಿರುವ ಮಹಾರಾಷ್ಟ್ರ ರಾಜ್ಯಕ್ಕೆ ರು.1269 ಕೋಟಿಗಳ ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದೆ.
ಬರ ಕುರಿತಂತೆ ಕೇಂದ್ರ ನೇತೃತ್ವದ ತಂಡವೊಂದು ಮಹಾರಾಷ್ಟ್ರ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದರಂತೆ ಕೇಂದ್ರದ ತಂಡ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಿತ್ತು.
ನೆರವು ಪ್ಯಾಕೇಜ್ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗಿತ್ತು. ಈ ವೇಳೆ ಕೇಂದ್ರದ ತಂಡ ಸಲ್ಲಿಸಿದ್ದ ವರದಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇದರಂತೆ ರು.1,269 ಕೋಟಿಗಳ ನೆರವು ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿದೆ.
ಕೃಷಿ ಕ್ಷೇತ್ರಕ್ಕೆ ಎದುರಾಗಿರುವ ನಷ್ಟವನ್ನು ಸರಿಪಡಿಸುವ ಸಲುವಾಗಿ ಆರಂಭದಲ್ಲಿ ರು.589.47 ಕೋಟಿ ಹಣವನ್ನು ಕೇಂದ್ರ ನೀಡಲಿದ್ದು, ನಂತರದ ದಿನಗಳಲ್ಲಿ ರು.679.54 ಕೋಟಿ ಹಣವನ್ನು ನೀಡಲಿದೆ ಎಂದು ತಿಳಿದುಬಂದಿದೆ.
ಗೃಹ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ, ಇನ್ನಿತರೆ ಹಿರಿಯ ಅಧಿಕಾರಿಗಳು, ಗೃಹ, ಹಣಕಾಸು ಹಾಗೂ ಕೃಷಿ ಕ್ಷೇತ್ರದ ಇತರೆ ಅಧಿಕಾರಿಗಳು ಹಾಜರಿದ್ದರು.
Advertisement