
ನವದೆಹಲಿ: ಗಡಿ ನಿಯಂತ್ರಣ ರೇಖೆ ದಾಟಿ ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದ ಭಾರತೀಯ ಯೋಧರ ಶೌರ್ಯ ಮತ್ತು ಸಾಹಸಕ್ಕೆ ಬಿಜೆಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ಪಾಕಿಸ್ತಾನಕ್ಕೆ ಇದೊಂದು ತಕ್ಕ ಪಾಠ ಎಂದು ಹೇಳಿದೆ.
ಈ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಸೈಯದ್ ಶಹನವಾಜ್ ಹುಸೇನ್ ಅವರು, ಎಲ್ಲ ಭಯೋತ್ಪಾದಕರಿಗೆ ಇದೊಂದು ಗುಣಪಾಠವಾಗಿದ್ದು, ಸ್ವಯಂ ರಕ್ಷಣೆಯ ಹಕ್ಕು ನಮಗೂ ಇದೆ ಎಂದು ಹೇಳಿದ್ದಾರೆ.
ಕಳೆದ ರಾತ್ರಿ ಗಡಿ ನಿಯಂತ್ರಣ ರೇಖೆ ಬಳಿ ಇರುವ ಕೇಲ್ ಮತ್ತು ಭೀಮ್ ಬರ್ ಪ್ರಾಂತ್ಯಗಳ ಸುಮಾರು 6 ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆಯ ಯೋಧರು ದಾಳಿ ನಡೆಸಿದ್ದು, ಉಗ್ರ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಸುರಕ್ಷಿತವಾಗಿ ಭಾರತ ಗಡಿ ಪ್ರವೇಶಿಸಿದ್ದಾರೆ. ಇಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಸೇನಾಮುಖ್ಯಸ್ಥ ರಣ್ ಬೀರ್ ಸಿಂಗ್ ಅವರು ಮಾಹಿತಿ ನೀಡಿದ್ದು, ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.
ಭಾರತೀಯ ಸೇನೆಯ ಈ ಕಾರ್ಯಾಚರಣೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Advertisement