ಸಜ್ಜನ್ ಗಡ ಮೃಗಾಲಯಕ್ಕೆ ಬಿಳಿ ಹುಲಿ ಹೊಸ ಆಕರ್ಷಣೆ, ಸಿಬ್ಬಂದಿಗೆ ಭಾಷಾ ಸಮಸ್ಯೆ

ಸಜ್ಜನ್ ಗಡ ಮೃಗಾಲಯಕ್ಕೆ ತಮಿಳುನಾಡಿನಿಂದ ಹೊಸ ಅತಿಥಿಯೊಬ್ಬನ ಆಗಮನವಾಗಿದ್ದು, ಅತಿಥಿ ಸತ್ಕಾರಕ್ಕೆ ಸಿದ್ಧವಾಗಿದ್ದ ಅಲ್ಲಿನ ಸಿಬ್ಬಂದಿ ಮಾತ್ರ ಇದೀಗ ಭಾಷಾ ಸಮಸ್ಯೆಯಿಂದ ಹೆಣಗಾಡ ತೊಡಗಿದ್ದಾರೆ.
ಬಿಳಿ ಹುಲಿ ರಾಮ (ಸಂಗ್ರಹ ಚಿತ್ರ)
ಬಿಳಿ ಹುಲಿ ರಾಮ (ಸಂಗ್ರಹ ಚಿತ್ರ)

ಜೋದ್ ಪುರ: ಸಜ್ಜನ್ ಗಡ ಮೃಗಾಲಯಕ್ಕೆ ತಮಿಳುನಾಡಿನಿಂದ ಹೊಸ ಅತಿಥಿಯೊಬ್ಬನ ಆಗಮನವಾಗಿದ್ದು, ಅತಿಥಿ ಸತ್ಕಾರಕ್ಕೆ ಸಿದ್ಧವಾಗಿದ್ದ ಅಲ್ಲಿನ ಸಿಬ್ಬಂದಿ ಮಾತ್ರ ಇದೀಗ ಭಾಷಾ ಸಮಸ್ಯೆಯಿಂದ ಹೆಣಗಾಡ ತೊಡಗಿದ್ದಾರೆ.

ಹೌದು..ಚೆನ್ನೈನ ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನದಿಂದ ಇತ್ತೀಚೆಗೆ ಬಿಳಿ ಹುಲಿಯೊಂದನ್ನು ಜೈಪುರದ ಸಜ್ಜನ್ ಗಡ ಮೃಗಾಲಯಕ್ಕೆ ನೀಡಲಾಗಿತ್ತು. ಅದಕ್ಕೆ ಬದಲಾಗಿ ಸಜ್ಜನ್ ಗಡ್  ಮೃಗಾಲಯದಿಂದ ನರಿಗಳನ್ನು ನೀಡುವ ಪ್ರಸ್ತಾವಕ್ಕೆ ಕೇಂದ್ರೀಯ ಮೃಗಾಲಯ ಇಲಾಖೆ ಅನುಮತಿ ನೀಡಿತ್ತು. ಅದರಂತೆ ಸಜ್ಜನ್ ಗಡ ಮೃಗಾಲಯಕ್ಕೆ ಬಿಳಿ ಹುಲಿ ರಾಮನನ್ನು ನೀಡಿ ಚೆನ್ನೈ  ಮೃಗಾಲಯಕ್ಕೆ ನರಿಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.

ಸಜ್ಜನ್ ಗಡ ಮೃಗಾಲಯದಲ್ಲಿ ಈಗಾಗಲೇ ದಾಮಿನಿ ಎಂಬ ಹೆಣ್ಣು ಹುಲಿ ಇದ್ದು ಅದರ ಸಂತಾನೋತ್ಪತ್ತಿಗಾಗಿ ಬಿಳಿ ಹುಲಿ ರಾಮನನ್ನು ಆಮದು ಮಾಡಿಕೊಳ್ಳಲಾಗಿತ್ತು. ಆ ಮೂಲಕ ಮೃಗಾಲಯದ  ಬಿಳಿ ಸಂತತಿ ಹೆಚ್ಚಿಸುವುದು ಅಧಿಕಾರಿಗಳ ಆಲೋಚನೆಯಾಗಿತ್ತು. ಆದರೆ ಮೃಗಾಲಯಕ್ಕೆ ಹೊಸ ಆಕರ್ಷಣೆಯಾಗಬಹುದು ಎಂದು ಖುಷಿಯಾಗಿದ್ದ ಸಜ್ಜನಗಡ ಸಿಬ್ಬಂದಿಗೆ ಇದೀಗ ಹೊಸ  ತಲೆನೋವು ಶುರುವಾಗಿದೆ. ಚೆನ್ನೈನಿಂದ ಜೋದ್ ಪುರಕ್ಕೆ ಹಾರಿರುವ ಬಿಳಿ ಹುಲಿ ರಾಮನೊಂದಿಗೆ ಪಳಗಲು ಅಲ್ಲಿನ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಸಿಬ್ಬಂದಿಗಳ ಯಾವುದೇ ಸೂಚನೆಗೂ  ಹುಲಿ ರಾಮ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲವಂತೆ.

ಇದಕ್ಕೆ ಕಾರಣವೇನು ಎಂದು ಹುಡುಕುತ್ತಾ ಹೋದರೆ ರಾಮ ಹಾಗೂ ಸಿಬ್ಬಂದಿ ನಡುವೆ ಭಾಷಾ ಸಮಸ್ಯೆ ಇರುವ ಕುರಿತು ತಿಳಿದುಹಂದಿದೆ. ಬಿಳಿ ಹುಲಿ ರಾಮ ಚೆನ್ನೈನಲ್ಲಿ ಇದ್ದುದರಿಂದ ಅಲ್ಲಿನ  ಸಿಬ್ಬಂದಿ ತಮಿಳು ಭಾಷೆಯಲ್ಲೇ ಹುಲಿಯನ್ನು ಪಳಗಿಸಿದ್ದಾರೆ. ಆದರೆ ಜೋದ್ ಪುರದ ಸಿಬ್ಬಂದಿಗೆ ಮೇವಾರಿ ಭಾಷೆಯನ್ನು ಹೊರತು ಪಡಿಸಿ ಬೇರಾವ ಭಾಷೆಯ ಪರಿಚಯವೇ ಇಲ್ಲ. ಹೀಗಾಗಿ  ಸಜ್ಜನ್ ಗಡ ಮೃಗಾಲಯದ ಸಿಬ್ಬಂದಿ ಹುಲಿಯೊಂದಿಗೆ ಪಳಗಲು ಹರಸಾಹಸ ಪಡುತ್ತಿದ್ದಾರೆ.

ಹೀಗಾಗಿ ಸಜ್ಜನ್ ಗಡ ಮೃಗಾಲಯದ ಅಧಿಕಾರಿ ಟಿ ಮೋಹನ್ ದಾಸ್ ಅವರು, ಚೆನ್ನೈ ಮೃಗಾಲಯಕ್ಕೆ ಮನವಿ ಪತ್ರವೊಂದನ್ನು ಬರೆದಿದ್ದು, ಬಿಳಿ ಹುಲಿ ರಾಮನ ಆರೈಕೆಗಾಗಿ ಓರ್ವ ತಮಿಳು  ಸಿಬ್ಬಂದಿಯನ್ನು ಕಳುಹಿಸಿಕೊಂಡುವಂತೆ ಮನವಿ ಮಾಡಿದ್ದಾರೆ.

2011ರಲ್ಲಿ ಚೆನ್ನೈ ಮೃಗಾಲಯದಲ್ಲಿ ಬಿಳಿ ಹುಲಿ ರಾಮನ ಜನನವಾಗಿತ್ತು. ಚಿಕ್ಕವಯಸ್ಸಿನಿಂದಲೂ ತಮಿಳು ಸಿಬ್ಬಂದಿಗಳೊಂದಿಗೆ ಪಳಗಿದ್ದ ರಾಮ ತಮಿಳು ಭಾಷೆಯಲ್ಲಿ ಮಾತನಾಡಿದರೆ ಮಾತ್ರ  ಪ್ರತಿಕ್ರಿಯಿಸುತ್ತಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com