ಸಾಂದರ್ಭಿಕ ಚಿತ್ರ
ದೇಶ
ಸರ್ಜಿಕಲ್ ಸ್ಟ್ರೈಕ್ಸ್ ಎಂದರೇನು? ಕಾರ್ಯಾಚರಣೆ ಹೇಗೆ?
ಇಂದು ಪ್ರತಿಯೊಬ್ಬ ಭಾರತೀಯನು ಸೇನೆಯ ಬಗ್ಗೆ ಹೆಮ್ಮೆಪಡುವ ದಿನ. ಭಾರತ-ಪಾಕಿಸ್ತಾನ ಗಡಿ ರೇಖೆಯ...
ನವದೆಹಲಿ: ಇಂದು ಪ್ರತಿಯೊಬ್ಬ ಭಾರತೀಯನು ಸೇನೆಯ ಬಗ್ಗೆ ಹೆಮ್ಮೆಪಡುವ ದಿನ.
ಭಾರತ-ಪಾಕಿಸ್ತಾನ ಗಡಿ ರೇಖೆಯ ಬಳಿ ಉಗ್ರರ ತರಬೇತಿ ತಾಣಗಳ ಮೇಲೆ ಭಾರತೀಯ ಸೇನೆ ಕಳೆದ ರಾತ್ರಿ ಸೀಮಿತ ದಾಳಿ(ಸರ್ಜಿಕಲ್ ಸ್ಟ್ರೈಕ್) ನಡೆಸಿದೆ ಎಂದು ಭಾರತೀಯ ಮಿಲಿಟರಿ ಸೇನೆಯ ಮಹಾ ನಿರ್ದೇಶಕ ಲೆ.ಜನರಲ್ ರಣಬೀರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗಪಡಿಸುತ್ತಿದ್ದಂತೆ ಸಂಚಲನ ಮೂಡಿದೆ.
ಹಾಗಾದರೆ ಈ ಸರ್ಜಿಕಲ್ ಸ್ಟ್ರೈಕ್ಸ್ ಎಂದರೇನು? ಅದರ ಕಾರ್ಯಾಚರಣೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ:
ಯುದ್ಧದಂತಹ ಸನ್ನಿವೇಶಗಳು ನಿರ್ಮಾಣವಾದಾಗ ಭಾರಿ ಪ್ರಮಾಣದ ಹಾನಿಗಳಾಗುತ್ತವೆ. ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿ ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಹಾನಿಯಾಗಳಾಗುತ್ತವೆ. ಇಂತಹ ಹಾನಿಗಳನ್ನು ತಪ್ಪಿಸಲು ಹಾಗೂ ಶತ್ರುಪಾಳಯದ ಎಲ್ಲ ವರ್ಗದ ಮೇಲೆ ಸಾಮೂಹಿಕವಾಗಿ ಎರಗುವುದಕ್ಕಿಂತ ನಿರ್ದಿಷ್ಟ ಜಾಗದಲ್ಲಿ ನಿರ್ದಿಷ್ಟ ವರ್ಗದ ಮೇಲೆ ದಾಳಿ ಮಾಡುವುದೇ ಸರ್ಜಿಕಲ್ ಸ್ಟ್ರೈಕ್ ಅಥವಾ ಸೀಮಿತ ದಾಳಿ ಎಂದು ಕರೆಯಲಾಗುತ್ತದೆ.
ಉದ್ದೇಶಿತ ಕಾನೂನುಬದ್ಧ ಸೇನಾ ಗುರಿಯನ್ನು ಈ ದಾಳಿ ಹೊಂದಿದ್ದು, ನಿರ್ದಿಷ್ಟ ಸ್ಥಳ ಮತ್ತು ಗುರಿಯನ್ನು ಮಾತ್ರ ಈ ದಾಳಿಯಲ್ಲಿ ನಾಶಪಡಿಸಲಾಗುತ್ತದೆ. ಈ ದಾಳಿಯಿಂದ ಸುತ್ತಮುತ್ತಲ ಕಟ್ಟಡಗಳು, ವಾಹನಗಳು, ರಚನೆಗಳು ಅಥವಾ ಇತರ ಸಾರ್ವಜನಿಕ ವಸ್ತುಗಳಿಗೆ, ಮೂಲಭೂತ ಸೌಲಭ್ಯಗಳಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.
ಉದಾಹರಣೆಗೆ: ಇತ್ತೀಚೆಗೆ ಮಯನ್ಮಾರ್ ನಲ್ಲಿ ಸೀಮಿತ ದಾಳಿ ಅಥವಾ ಸರ್ಜಿಕಲ್ ಸ್ಟ್ರೈಕ್ಸ್ ನ್ನು ನಡೆಸಲಾಗಿತ್ತು. ಭಾರತೀಯ ಸೇನೆಯ ಸುಮಾರು 70 ಕಮಾಂಡೋಗಳ ತಂಡ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಅಲ್ಲಿ ಸುಮಾರು 40 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ 38 ನಾಗಾ ಬಂಡುಕೋರರು ಸದೆಬಡಿಯಲಾಗಿತ್ತು. ಅಲ್ಲದೆ ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದರು.
ನಿಖರ ಬಾಂಬ್ ದಾಳಿ ಕೂಡ ಸರ್ಜಿಕಲ್ ಸ್ಟ್ರೈಕ್ ಗೆ ಉದಾಹರಣೆಯಾಗಿದೆ. ಕಾರ್ಪೆಟ್ ಬಾಂಬ್ ವಿರುದ್ಧ ಇದನ್ನು ಹೋಲಿಸಬಹುದು. ಒಂದು ಬಾಧಿತ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ನಾಶ ಹೊಂದುವುದು ಕಾರ್ಪೆಟ್ ಬಾಂಬ್ ದಾಳಿಯಾಗಿದೆ.
2003ರಲ್ಲಿ ಅಮೆರಿಕ ಪಡೆ ಇರಾಕ್ ಮೇಲೆ ಯುದ್ಧ ಸಾರಿದ್ದು ಸರ್ಜಿಕಲ್ ಸ್ರ್ಟೈಕ್ ಗೆ ಉತ್ತಮ ಉದಾಹರಣೆ, ಏಕೆಂದರೆ ಆಗ ಸರ್ಕಾರಿ ಕಟ್ಟಡಗಳು, ಇರಾಕ್ ನ ಮಿಲಿಟರಿ ಪಡೆಗಳ ಮೇಲೆ ಅಮೆರಿಕಾ ವ್ಯವಸ್ಥಿತವಾಗಿ ದಾಳಿ ನಡೆಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ