ನವದೆಹಲಿ: ದೇಶಾದ್ಯಂತ ಸಂಪೂರ್ಣ ಮದ್ಯ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಬಿಜೆಪಿ ನಾಯಕ ಅಶ್ವನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದ ನ್ಯಾಯಮೂರ್ತಿ ಅರ್ಜುನ್ ಕುಮಾರ್ ಸಿಕ್ರಿ ಹಾಗೂ ನ್ಯಾಮೂರ್ತಿ ಎನ್.ವಿ.ರಾಮಣ್ಣ ಅವರನ್ನೊಳಗೊಂಡ ಪೀಠ, ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿದೆ.
ಮದ್ಯ ಸೇವನೆ ರಾಜ್ಯದ ನೀತಿ ನಿಯಮಗಳಡಿ ಬರುವುದಿಲ್ಲಿ ಮತ್ತು ಸಾರ್ವಜನಿಕರ ಆರೋಗ್ಯ ಸುಧಾರಣೆ ರಾಜ್ಯದ ಪ್ರಾಥಮಿಕ ಕರ್ತವ್ಯಗಳ ಪೈಕಿ ಒಂದಾಗಿದ್ದು, ಅಮಲೇರಿಸುವ ಹಾಗೂ ಆರೋಗ್ಯಕ್ಕೆ ಹಾನಿಕರವಾದ ಮದ್ಯವನ್ನು ನಿಷೇಧಿಸಬೇಕು ಎಂದು ಉಪಾಧ್ಯಾಯ ಪಿಐಎಲ್ ಸಲ್ಲಿಸಿದ್ದರು.
ರಸ್ತೆ ಅಪಘಾತಗಳಿಗೆ, ಮಹಿಳೆಯರ ವಿರುದ್ಧ ಅಪರಾಧಗಳಿಗೆ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸೇರಿದಂತೆ ಇತರೆ ಹಲವು ಸಮಾಜ ವಿರೋಧಿ ಕೃತ್ಯಗಳಿಗೆ ಮದ್ಯವೇ ಕಾರಣ ಎಂದು ಉಪಾಧ್ಯಾಯ ಹೇಳಿದ್ದಾರೆ.