ಹೊಸ ತಲೆಮಾರಿನ ಮತಯಂತ್ರಗಳು
ಹೊಸ ತಲೆಮಾರಿನ ಮತಯಂತ್ರಗಳು

ಬರಲಿದೆ ಹೊಸ ತಲೆಮಾರಿನ ಮತಯಂತ್ರ, ತಿರುಚಲು ಪ್ರಯತ್ನಿಸಿದರೆ ಯಂತ್ರವೇ ಸ್ಥಗಿತ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಮತಯಂತ್ರಗಳಲ್ಲಿ ಲೋಪ ಸಂಭವಿಸಿದೆ ಎಂಬ ರಾಜಕೀಯ ಪಕ್ಷಗಳ ಗಂಭೀರ ಆರೋಪಗಳ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಹೊಸ ತಲೆಮಾರಿನ ಮತಯಂತ್ರಗಳನ್ನು ಅಳವಜಿಸಿಕೊಳ್ಳಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.
Published on

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಳಕೆಯಾದ ಮತಯಂತ್ರಗಳಲ್ಲಿ ಲೋಪ ಸಂಭವಿಸಿದೆ ಎಂಬ ರಾಜಕೀಯ ಪಕ್ಷಗಳ ಗಂಭೀರ ಆರೋಪಗಳ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗ ಹೊಸ ತಲೆಮಾರಿನ  ಮತಯಂತ್ರಗಳನ್ನು ಅಳವಜಿಸಿಕೊಳ್ಳಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಸ್ವಯಂಚಾಲಿತ ’ಕಿಲ್ ಸ್ವಿಚ್’ ಹೊಂದಿರುವ ಹೊಸ ತಲೆಮಾರಿನ ಮತಯಂತ್ರಗಳ ಖರೀದಿಗೆ ಚುನಾವಣಾ ಆಯೋಗ ಚಿಂತನೆಯಲ್ಲಿ ತೊಡಗಿದ್ದು, ಇದರಲ್ಲಿ ಯಾವುದೇ ಅಕ್ರಮ ಎಸಗಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ.  ಮತದಾನದ ಬಳಿಕ ಅಥವಾ ಮತದಾನಕ್ಕೂ ಮೊದಲು ಯಂತ್ರವನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಲು ಪ್ರಯತ್ನಿಸಿದರೆ ಯಂತ್ರ ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆಯಂತೆ.

ಹೊಸ ತಲೆಮಾರಿನ ಎಂ-3 ಮಾದರಿಯ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳು ಸ್ವಯಂ ದೃಢೀಕರಣ ವ್ಯವಸ್ಥೆಯನ್ನು ಹೊಂದಿದ್ದು, ಪಬ್ಲಿಕ್ ಕೀ ಇಂಟರ್ ಫೇಸ್ ಆಧಾರಿತ ಪರಸ್ಪರ ದೃಢೀಕರಣ ವ್ಯವಸ್ಥೆ ಈ ಅತ್ಯಾಧುನಿಕ  ಮತಯಂತ್ರದ ವಿಶೇಷವಾಗಿದೆ. ಈ ಅತ್ಯಾಧುನಿಕ ಮತಯಂತ್ರಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ವಿದ್ಯುನ್ಮಾನ ನಿಗಮ(ಎಸಿಐಎಲ್)ದಲ್ಲಿ ಮತ್ತು ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಬಿಇಎಲ್​ನಲ್ಲಿ  ತಯಾರಾದ ಮತಯಂತ್ರಗಳೊಂದಿಗೆ ಮಾತ್ರ ತನ್ನ ದತ್ತಾಂಶವನ್ನು ಹಂಚಿಕೊಳ್ಳುತ್ತವೆ. ಇತರೆ ಕಂಪನಿಗಳು ತಯಾರಿಸಿದ ಮತಯಂತ್ರಗಳೊಂದಿಗೆ ಇವು ದತ್ತಾಂಶ ಹಂಚಿಕೊಳ್ಳುವುದಿಲ್ಲ ಎಂದು ಆಯೋಗ ಮಾಹಿತಿ ನೀಡಿದೆ.

ಇನ್ನು ಈ ಹೊಸ ತಲೆಮಾರಿನ ಮತಯಂತ್ರಗಳನ್ನು ಖರೀದಿಸಲು ಬರೊಬ್ಬರಿ 1,940 ಕೋಟಿ ರು.ಗಳ ಅಗತ್ಯವಿದ್ದು, ಕಳೆದ ವರ್ಷ ಡಿಸೆಂಬರ್ 7ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೊಸ ಮತಯಂತ್ರಗಳ ಖರೀದಿಗೆ  ಅನುಮೋದನೆ ನೀಡಲಾಗಿತ್ತು. ಆದರೆ ಅತ್ಯಾಧುನಿಕ ಹೊಸ ಮತಯಂತ್ರಗಳ ಖರೀದಿಗೆ 1,940 ಕೋಟಿ ರೂ.ಗಳ ಅಗತ್ಯವಿದೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಈ ಕುರಿತು ಮುಂದಿನ ಸಂಸತ್ ಅಧಿವೇಶನದಲ್ಲಿ  ಪ್ರಸ್ತಾಪಿಸಲಾಗುವುದು ಎಂದು ಕಾನೂನು ಖಾತೆಯ ರಾಜ್ಯ ಸಚಿವ ಪಿಪಿ ಚೌಧರಿ ತಿಳಿಸಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಹೊಸ ಮತಯಂತ್ರ
ಸದ್ಯಕ್ಕೆ ಚುನಾವಣಾ ಆಯೋಗ 2006ರಲ್ಲಿ ಖರೀದಿಸಿದ ಸುಮಾರು 9,30,430 ಇವಿಎಂಗಳನ್ನು ಬಳಕೆ ಮಾಡುತ್ತಿದ್ದು, ಈ ಇವಿಎಂಗಳು 15 ವರ್ಷಗಳಷ್ಟು ಹಳೆಯದಾದ ಕಾರಣ 2018ರ ಲೋಕಸಭಾ ಚುನಾವಣೆಯಲ್ಲಿ ಹೊಸ  ಮತಯಂತ್ರಗಳನ್ನು ಬಳಸಲಾಗುವುದು ಎಂದು ಕೇಂದ್ರ ಕಾನೂನು ಸಚಿವರು ರಾಜ್ಯಸಭೆಯಲ್ಲಿ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತೆಯೇ ಕಳೆದ ಜುಲೈ 20ರಂದು ಕೇಂದ್ರ ಚುನಾವಣಾ ಆಯೋಗ 14 ಲಕ್ಷ ಹೊಸ  ಮತಯಂತ್ರಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕಳುಹಿಸಿತ್ತು. ಹೀಗಾಗಿ ಎಂ-3 ಮಾದರಿಯ ವಿದ್ಯುನ್ಮಾನ ಮತಯಂತ್ರಗಳು ಮುಂದಿನ ಲೋಕಸಭಾ ಚುನಾವಣೆ ವೇಳೆ ಬಳಕೆಯಾಗುವ ಸಾಧ್ಯತೆಯಿದೆ ಎಂದು  ಆಯೋಗ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com