ಲೋಕಸಭೆಯಲ್ಲಿ ತನ್ನ ಮುಗ್ಧತೆ ವಿವರಿಸಿದ ಗಾಯಕ್ವಾಡ್; ತಳ್ಳಿಹಾಕಿದ ವಿಮಾನಯಾನ ಸಚಿವ!

ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದಕ್ಕೀಡಾಗಿದ್ದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರು ಇದೇ ಮೊದಲ ಬಾರಿಗೆ ಲೋಕಸಭೆ ಕಲಾಪಕ್ಕೆ ಹಾಜರಾಗಿದ್ದು,...
ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್
ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್
ನವದೆಹಲಿ: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದಕ್ಕೀಡಾಗಿದ್ದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರು ಇದೇ ಮೊದಲ ಬಾರಿಗೆ ಲೋಕಸಭೆ ಕಲಾಪಕ್ಕೆ ಹಾಜರಾಗಿದ್ದು, ಹಲ್ಲೆ ಪ್ರಕರಣ ಸಂಬಂಧ ವಿವರಣೆಯನ್ನು ನೀಡಿದ್ದಾರೆ. 
ಲೋಕಸಭೆಗೆ ಹಾಜರಾದ ಬಳಿಕ ವಿಮಾನದಲ್ಲಿ ನಡೆದ ಘಟನೆಯ ವಿವರಣೆಯನ್ನು ಗಾಯಕ್ವಾಡ್ ನೀಡಿದರು, ವಿಮಾನದ ಸಿಬ್ಬಂದಿಗಳು ನನ್ನ ಮೇಲೆ ಕೂಗಾಡಿದ್ದರು. ಮಾಧ್ಯಮಗಳು ಹಾಗೂ ಸಂಸದರು ನನ್ನ ಮೇಲೆ ಹರಿಹಾಯುತ್ತಿದ್ದಾರೆ. ನಾನು ಮಾಡಿದ ಅಪರಾಧವಾದರೂ ಏನು...?  ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಏರ್ ಇಂಡಿಯಾ ಅಧಿಕಾರಿಗಳಂತೂ ನಾನು ಕ್ಷಮೆಯಾಚಿಸುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ ಪ್ರಕರಣ ಸಂಬಂಧ ಸಂಪೂರ್ಣವಾಗಿ ತನಿಖೆ ನಡೆಸಬೇಕೆಂದು ಸಂಸತ್ತಿನಿಂದ ಮುಂದೆ ಮನವಿಯಿಟ್ಟರು. 
ಈ ವೇಳೆ ಗಾಯಕ್ವಾಡ್ ವಿರುದ್ಧ ಕಿಡಿಕಾರಿದ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು, ಸುರಕ್ಷತೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಲು ಸಾಧ್ಯವಿಲ್ಲ. ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. 
ಗಾಯಕ್ವಾಡ್ ಅವರು ಸಂಸತ್ತಿಗೆ ಹಾಜರಾಗುತ್ತಿದ್ದಂತೆಯ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಹಲ್ಲೆ ಪ್ರಕರಣದ ವಿಚಾರ ಚರ್ಚೆ ಆರಂಭವಾಯಿತು. ಈ ವೇಳೆ ಮಾತನಾಡಿದ ಶಿವಸೇನೆ ನಾಯಕ ಅನಂದ್ ರಾವ್ ಅದ್ಸುಲ್ ಅವರು, ವಿವಾದ ಸೃಷ್ಟಿಯಾದಾಗಿನಿಂದಲೂ ಪ್ರಕರಣಕ್ಕೆ ಸಂಬಂಧಸಿದಂತೆ ಪಕ್ಷವು ಸಹಕಾರ ನೀಡುತ್ತಿದೆ. ಪ್ರಸ್ತುತ ಗಾಯಕ್ವಾಡ್ ಅವರೇ ಸಂಸತ್ತಿನಲ್ಲಿ ಹಾಜರಿದ್ದು, ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು. 

ಈ ವೇಳೆ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಶೂನ್ಯ ಅವಧಿಯಲ್ಲಿ ಗಾಯಕ್ವಾಡ್ ಮಾತನಾಡಬಹುದು. ಪ್ರಶ್ನೋತ್ತರ ವೇಳೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. 

ಅದ್ಸುಲ್ ಮಾತನಾಡುವುದಕ್ಕೂ ಮುನ್ನ ಪ್ರಾದೇಶಿಕ ವಿಮಾನ ನಿಲ್ದಾಣಗಳ ಕುರಿತ ಪ್ರಶ್ನೆಗೆ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಉತ್ತರ ನೀಡುತ್ತಿದ್ದರು. ಈ ವೇಳೆ ಶಿವಸೇನೆ ಪಕ್ಷದ ಸದಸ್ಯರು ಏರ್ ಇಂಡಿಯಾ ಹಾಗೂ ವಿಮಾನಯಾನ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು. ಗೂಂಡಾ ರಾಜ್ಯವನ್ನು ನಿಲ್ಲಿಸಿ...ನ್ಯಾಯವನ್ನು ಕೊಡಿ...ನ್ಯಾಯ ಕೊಡಿ ಎಂದು ಕೂಗಿದರು. 
ನಂತರ ಮಾತನಾಡಿದ್ದ ಶಿವಸೇನೆ ಸಂಸದ ಅನಂತ್ ಗೀತೆಯವರು, ಗಾಯಕ್ವಾಡ್ ಪ್ರಯಾಣಕ್ಕೆ ವಿಮಾನ ಸಂಸ್ಥೆಗಳು ಹೇರಿರುವ ನಿಷೇಧದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಮುಂಬೈನಿಂದ ಒಂದು ವಿಮಾನ ಕೂಡ ಹೊರಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದರು. ಅಲ್ಲದೆ, ವಿಮಾನಯಾನ ಸಚಿವರ ಮೇಜನ್ನು ಹಲವು ಬಾರಿ ತಟ್ಟಿದರು. ಅನಂತ್ ಗೀತೆಯವರು ಈ ರೀತಿಯ ವರ್ತನೆ ತೋರುತ್ತಿದ್ದರೂ, ಗಜಪತಿ ರಾಜು ಅವರು ಮಾತ್ರ ಸಮಾಧಾನದಿಂದಲೇ ಸಮರ್ಥನೆ ನೀಡುತ್ತಿದ್ದರು. 

ಕೆಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಅನಂತ್ ಗೀತೆಯವರ ವರ್ತನೆ ತೀವ್ರಗೊಳ್ಳುತ್ತಿದಂತೆಯೇ ಸಚಿವ ಗಜಪತಿ ರಾಜು ಅವರ ರಕ್ಷಣೆಗೆ ಕೆಲ ಬಿಜೆಪಿ ಸಂಸದರು ಧಾವಿಸಿದ್ದರು ಎಂದು ತಿಳಿಸಿವೆ. ನಂತರ ಕೇಂದ್ರ ಸಚಿವ ರಾಜನಾಥ ಸಿಂಗ್ ಅವರು ರಾಜು ಅವರ ಮೇಜಿನ ಬಳಿ ಹೋಗಿ ಗೀತೆ ಅವರನ್ನು ಸಮಧಾನಪಡಿಸಿದ್ದಾರೆ. 

ನಂತರ ಸಂಸತ್ತಿನಲ್ಲಿ ಉಂಟಾಗಿದ್ದ ಉದ್ರಿಕ್ತ ವಾತಾವರಣ ತಿಳಿಗೊಂಡಿದೆ. ಗಜಪತಿಯವರು ಹೇಳಿಕೆ ನೀಡಿದ ಬಳಿಕ ಸ್ಪೀಕರ್ ಮಹಾಜನ್ ಅವರು ಕಲಾಪವನ್ನು ಮುಂದೂಡಿದರು. ಸಂಸತ್ತಿನಲ್ಲಿ ಎಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ಬಿಜೆಪಿ ಮಾತ್ರ ಮೌನವಹಿಸಿತ್ತು. ಈ ಮೂಲಕ ಬಿಜೆಪಿ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com