ವೋಟಿಗಾಗಿ ನೋಟು ಆರೋಪ: ಚಿತ್ರ ನಟ ಶರತ್ ಕುಮಾರ್, ಸಚಿವ ಸಿ.ವಿಜಯ ಭಾಸ್ಕರ್ ಮನೆ ಮೇಲೆ ಐಟಿ ದಾಳಿ

ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ...
ಚಿತ್ರನಟ ಶರತ್ ಕುಮಾರ್ ಮತ್ತು ತಮಿಳು ನಾಡು ಸಚಿವ ಸಿ.ವಿಜಯ ಭಾಸ್ಕರ್
ಚಿತ್ರನಟ ಶರತ್ ಕುಮಾರ್ ಮತ್ತು ತಮಿಳು ನಾಡು ಸಚಿವ ಸಿ.ವಿಜಯ ಭಾಸ್ಕರ್
ಚೆನ್ನೈ: ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚಿತ್ರನಟ ಶರತ್ ಕುಮಾರ್ ಮತ್ತು ತಮಿಳು ನಾಡು ಸರ್ಕಾರದ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್ ಹಾಗೂ ಇತರ ಇಬ್ಬರ  ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಜೆ.ಜಯಲಲಿತಾ ನಿಧನದ ನಂತರ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದೇ 12ರಂದು ಚುನಾವಣೆ ನಡೆಯಲಿದ್ದು ಈ ಸಂಬಂಧ ಮತದಾರರಿಗೆ ಹಣ ಹಂಚಿದ ಆರೋಪ ಕೇಳಿಬರುತ್ತಿದೆ.
ಚೆನ್ನೈಯಲ್ಲಿರುವ ನಟ ಶರತ್ ಕುಮಾರ್ ಮತ್ತು ವಿಜಯ ಭಾಸ್ಕರ್ ಅವರ ಮನೆಗೆ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು  ತಪಾಸಣೆ ನಡೆಸಿದರು. ಸಚಿವ ವಿಜಯ ಭಾಸ್ಕರ್ ಮತ್ತು ಅವರ ಸಹಚರರು ಹೊಂದಿರುವ ಆಸ್ತಿ ಸೇರಿದಂತೆ ಚೆನ್ನೈನ 34 ಕಡೆಗಳಲ್ಲಿ ಹಾಗೂ ತಮಿಳು ನಾಡಿನ ಇತರ 11 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಚೆನ್ನೈನ ಗ್ರೀನ್ ವೇ ರಸ್ತೆಯಲ್ಲಿರುವ ವಿಜಯ್ ಭಾಸ್ಕರ್ ಅವರ ನಿವಾಸ, ಅವರ ಹುಟ್ಟೂರಾದ ಪುದುಕೊಟ್ಟೈಯಲ್ಲಿ ರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಅವರಿಗೆ ಸೇರಿದ ಕಲ್ಲಿನ ಕ್ವಾರಿ ಮೇಲೂ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಇಲುಪ್ಪುರದಲ್ಲಿ ಸೌರಾಷ್ಟ್ರ ರಸ್ತೆಯಲ್ಲಿರುವ ಸಚಿವರ ಇನ್ನೊಂದು ಮನೆ ಮೇಲೂ ದಾಳಿಯಾಗಿದೆ.
ಆರ್ ಕೆ ನಗರ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರಿಗೆ ಹಣ ಹಂಚಿಕೆ ಮಾಡಿ ವಿಕೆ ಶಶಿಕಲಾ ಬಣಕ್ಕೆ ಮತ ಹಾಕಬೇಕೆಂದು ಕೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಈ ದಾಳಿ ನಡೆದಿದೆ.
ವಿಜಯ ಭಾಸ್ಕರ್ ಅವರು ಶಶಿಕಲಾ ಬಣಕ್ಕೆ ಸೇರಿದ್ದು, ನಟ ಶರತ್ ಕುಮಾರ್ ಅವರ ಎಐಎಸ್ಎಂಕೆ ಇತ್ತೀಚೆಗೆ ಶಶಿಕಲಾ ಅವರ ಬಣದ ಅಭ್ಯರ್ಥಿ ಟಿಟಿವಿ ದಿನಕರನ್ ಗೆ ಬೆಂಬಲ ನೀಡಿದ್ದರು.
ಇವರೊಂದಿಗೆ ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಗೀತಾ ಲಕ್ಷ್ಮಿ ಅವರ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.ಎಡಿಎಂಕೆಯ ರಾಜೇಂದ್ರನ್ ಅವರ ನಿವಾಸಕ್ಕೆ ಕೂಡ ಐಟಿ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಿದ್ದಾರೆ.
ಆದರೆ, ಈ ಆರೋಪಗಳನ್ನು ಎಐಎಡಿಎಂಕೆಯ ಉಪಾಧ್ಯಕ್ಷ ಹಾಗೂ ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿಯಾದ ದಿನಕರನ್ ಅವರು ತಳ್ಳಿಹಾಕಿದ್ದಾರೆ. ಈ ಆರೋಪಗಳೆಲ್ಲವೂ ವಿರೋಧ ಪಕ್ಷವಾದ ಡಿಎಂಕೆ ಪಕ್ಷದ ಕುತಂತ್ರ ಎಂದು ಆರೋಪಿಸಿದೆ. 
ಮರಳು ಮಾಫಿಯಾ ದಂಧೆಯಲ್ಲಿ ಕೈವಾಡವಿರುವ ಆರೋಪ,  ಶಂಕೆಯ ಮೇಲೆ ಕೆಲ ತಿಂಗಳ ಹಿಂದೆ ತಮಿಳು ನಾಡು ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ರಾಮ ಮೋಹನ್ ರಾವ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. 
ಆಸಕ್ತಿಕರ ವಿಷಯವೆಂದರೆ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರಿಗೆ ನಿಕಟವರ್ತಿಗಳಾಗಿದ್ದ ಕೆಲವು ರಿಯಲ್ ಎಸ್ಟೇಟ್ ಘಟಕಗಳ ಮೇಲೆ ರಾಜ್ಯ ಪೊಲೀಸರು ದಾಳಿ ನಡೆಸಿದ ಮರುದಿನವೇ ಎಐಎಡಿಎಂಕೆಯ ಶಶಿಕಲಾ ಬಣದ ಸಚಿವರು ಮತ್ತು ಬೆಂಬಲಿಗರ ಮೇಲೆ ಐಟಿ ಇಲಾಖೆ ದಾಳಿ ನಡೆದಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com