ತ್ರಿವಳಿ ತಲಾಖ್ ನ್ನು ಒಂದೂವರೆ ವರ್ಷದಲ್ಲಿ ನಿಲ್ಲಿಸುತ್ತೇವೆ; ಸರ್ಕಾರದ ಮಧ್ಯ ಪ್ರವೇಶದ ಅಗತ್ಯವಿಲ್ಲ: ಮುಸ್ಲಿಂ ಮಂಡಳಿ

ವಿವಾದಿತ ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿವಾದಿತ ತ್ರಿವಳಿ ತಲಾಖ್ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಇನ್ನು ಒಂದೂವರೆ ವರ್ಷದಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗಾಣಿಸಲಿದ್ದು, ಸರ್ಕಾರದ ಮಧ್ಯ ಪ್ರವೇಶದ ಅವಶ್ಯಕತೆಯಿಲ್ಲ ಎಂದು ಹೇಳಿದೆ.
ತ್ರಿವಳಿ ತಲಾಖ್ ಪದ್ಧತಿಯಿಂದ ಭಾರತ ದೇಶದಲ್ಲಿ ಅನೇಕ ಮುಸ್ಲಿಂ ಕುಟುಂಬಗಳು ಹಾಳಾಗಿವೆ. ಲಿಂಗ  ಸಮಾನತೆ ಮತ್ತು ಮಹಿಳೆಯರಿಗೆ ಗೌರವ,  ಘನತೆ ಸಿಗಬೇಕು, ಈ ವಿಷಯದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ ಮತ್ತು ಹೊಂದಾಣಿಕೆ ಸಾಧ್ಯವಿಲ್ಲ. ಇನ್ನು ಒಂದೂವರೆ ವರ್ಷದಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಲು ಮಂಡಳಿ ನಿರ್ಧರಿಸಿದ್ದು ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದು ಬೇಡ ಎಂದು ಮಂಡಳಿಯ ಉಪಾಧ್ಯಕ್ಷ ಡಾ.ಸಯೀದ್ ಸಾದಿಕ್ ಹೇಳಿರುವುದಾಗಿ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ಶರಿಯತ್ ಮತ್ತು ತ್ರಿವಳಿ ತಲಾಖ್ ನ್ನು ಬೆಂಬಲಿಸಿ ದೇಶಾದ್ಯಂತ ಮುಸ್ಲಿಂ ಮಹಿಳೆಯರಿಂದ 3.50 ಕೋಟಿ ಅರ್ಜಿಗಳು ಬಂದಿವೆ ಎಂದು ಮಂಡಳಿ ತಿಳಿಸಿದೆ. ತ್ರಿವಳಿ ತಲಾಖ್ ನ್ನು ವಿರೋಧಿಸುವ ಮುಸ್ಲಿಂ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂದು ಮಂಡಳಿಯ ಮಹಿಳಾ ಘಟಕದ ಮುಖ್ಯ ಸಂಘಟಕಿ ಆಸ್ಮಾ ಜೊಹ್ರಾ ತಿಳಿಸಿದ್ದಾರೆ.
ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಮೇ 11ರಿಂದ ತ್ರಿವಳಿ ತಲಾಖ್ ಗೆ ಸಂಬಂಧಪಟ್ಟ ವಿಚಾರಣೆ ನಡೆಸಲಿದೆ. ಮುಸ್ಲಿಂ ಧರ್ಮದಲ್ಲಿ ಪತಿ ಮೂರು ಬಾರಿ ತಲಾಖ್ ಎಂಬ ಶಬ್ದವನ್ನು ಉಚ್ಚರಿಸಿದರೆ ಪತ್ನಿಯಿಂದ ವಿಚ್ಛೇದನ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com