ವ್ಯಕ್ತಿಯ ಕ್ಯಾನ್ಸರ್ ಗೆ ಕಾರಣವಾದ ಮೊಬೈಲ್ ಟವರ್ ಸ್ಥಗಿತಕ್ಕೆ "ಸುಪ್ರೀಂ" ಮಹತ್ವದ ಆದೇಶ!

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಮೊಬೈಲ್ ಟವರ್ ಅನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವ್ಯಕ್ತಿಯ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಮೊಬೈಲ್ ಟವರ್ ಅನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ.

42 ವರ್ಷದ ಹರೀಶ್ ಚಾಂದ್ ತಾವರ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಮೊಬೈಲ್ ಟವರ್ ನಿಂದಾಗಿ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಎಂಬ  ಅರ್ಜಿದಾರನ ವಾದಕ್ಕೆ ಮನ್ನಣೆ ನೀಡಿ ಕೂಡಲೇ ಮೊಬೈಲ್ ಟವರ್ ಅನ್ನು ಸ್ಥಗಿತಗೊಳಿಸುವಂತೆ ಸಂಬಂಧ ಪಟ್ಟ ಸಿಬ್ಬಂದಿಗೆ ಸೂಚಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಮೂಲಗಳ ಪ್ರಕಾರ ಮಧ್ಯ ಪ್ರದೇಶದ ಗ್ವಾಲಿಯರ್ ನ ದಾಲ್ ಬಜಾರ್ ಪ್ರದೇಶದ ನಿವಾಸಿಯಾಗಿರುವ ಹರೀಶ್ ಚಾಂದ್ ತಾವರ್ ಎಂಬ 40 ವರ್ಷ ವ್ಯಕ್ತಿ ತಮ್ಮ ನೆರೆಯ ಮನೆಯ ಮೇಲ್ಛಾವಣಿ ಮೇಲೆ 2002ರಲ್ಲಿ ಬಿಎಸ್ಎನ್ಎಲ್  ಸಂಸ್ಥೆಗೆ ಸೇರಿದ ಮೊಬೈಲ್ ಟವರ್ ಅನ್ನು ಕಾನೂನು ಬಾಹಿರವಾಗಿ ಸ್ಥಾಪಿಸಲಾಗಿದೆ. ಕಳೆದ 14 ವರ್ಷಗಳಿಂದ ಈ ಟವರ್ ನಿಂದ ಕ್ಯಾನ್ಸರ್ ಗೆ ಕಾರಣವಾಗುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯಷನ್ ಹೊರಬರುತ್ತಿದ್ದು, ಇದರಿಂದ  ತಮಗೆ ಮಾರಕ ಕ್ಯಾನ್ಸರ್ ರೋಗ ಬಂದಿದೆ. ಹೀಗಾಗಿ ಕೂಡಲೇ ಈ ಟವರ್ ಅನ್ನು ಸ್ಥಗಿತಗೊಳಿಸಬೇಕು ಎಂದು ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಪೂರಕವೆಂಬಂತೆ ತಮ್ಮ ಅನಾರೋಗ್ಯಕ್ಕೆ ದೀರ್ಘಕಾಲದಿಂದ ಬರುತ್ತಿರುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯಷನ್ನೇ ಕಾರಣ ಎಂದು ಹೇಳುವ ವೈದ್ಯಕೀಯ ವರದಿಯನ್ನೂ ಕೂಡ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದರು. ಎಲ್ಲ  ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ನ ನ್ಯಾ,ರಂಜನ್ ಗಗೋಯ್ ಹಾಗೂ ನವೀನ್ ಸಿನ್ಹಾ ನೇತೃತ್ವದ ದ್ವಿಸದಸ್ಯ ಪೀಠ ಇನ್ನು 7 ದಿನಗಳಲ್ಲಿ ಬಿಎಸ್ಎನ್ಎಲ್ ಟವರ್ ಅನ್ನು ಸ್ಥಗಿತಗೊಳಿಸುವಂತೆ ಮಹತ್ವದ  ಆದೇಶ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮೊಬೈಲ್ ಟವರ್ ಗಳಿಂದಾಗಿ ಆನಾರೋಗ್ಯಕ್ಕೆ ತುತ್ತಾದ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಪ್ರೀಂ ಕೋರ್ಟ್ ನಲ್ಲೂ ಈ ಬಗ್ಗೆ ಸಾಕಷ್ಟು ದೂರುಗಳು ದಾಖಲಾಗಿವೆ. ಇದೇ ಕಾರಣಕ್ಕೆ ಕಳೆದ  ವರ್ಷ ಸುಪ್ರೀಂ ಕೋರ್ಟ್ ಮೊಬೈಲ್ ಟವರ್ ನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇನ್ನು ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ಟವರ್ ಗಳನ್ನು  ಸ್ಥಾಪಿಸಬಾರದು ಎಂಬ ನಿಯಮವಿದ್ದರೂ, ಮೊಬೈಲ್ ಸೇವಾ ಸಂಸ್ಥೆಗಳು ತಮ್ಮ ಲಾಭಕ್ಕಾಗಿ ಕಟ್ಟಡದ ಮಾಲೀಕರಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ನಿಯಮ ಬಾಹಿರವಾಗಿ ಜನವಸತಿ ಪ್ರದೇಶಗಳ ಮೇಲೆ ಟವರ್ ಗಳನ್ನು  ಸ್ಥಾಪಿಸುತ್ತಿದ್ದಾರೆ. ಈ ಬಗ್ಗೆ ಹಲವು ಜಾಗೃತಿ ಅಭಿಯಾನಗಳು ಇಂದಿಗೂ ನಡೆಯುತ್ತಿವೆಯಾದರೂ ನಿರೀಕ್ಷಿತ ಫಲ ದೊರೆತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com