ಲಕ್ನೋ: ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್ ಸಂಬಂಧ ಪಟ್ಟಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.
ತ್ರಿವಳಿ ತಲಾಖ್ ಅನ್ನು ಹಿಂದೂಗಳ ಪುರಾಣ ಗ್ರಂಥ ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಹೋಲಿಸಿದ್ದಾರೆ. ಜ್ವಲಂತ ಸಮಸ್ಯೆಯಾಗಿರುವ ತ್ರಿವಳಿ ತಲಾಖ್ ಬಗ್ಗೆ ಮೌನ ವಹಿಸುವುದು ದ್ರೌಪದಿಯ ವಸ್ತ್ರಾಪಹರಣದಷ್ಟೇ ಸಮಾನ ತಪ್ಪು ಎಂದು ಹೇಳಿದ್ದಾರೆ.
ದಿವಂಗತ ರಾಜಕಾರಣಿ ಚಂದ್ರಶೇಖರ್ ಅವರ ಸಂಬಂಧಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಯೋಗಿ ಆದಿತ್ಯನಾಥ್ ಚಂದ್ರಶೇಖರ್ ಕೂಡ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು ಎಂದು ಹೇಳಿದ್ದಾರೆ. ಎಲ್ಲಾ ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಗಬೇಕು ಎಂದು ಅವರು ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಬಗ್ಗೆ ಭಾನುವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೊಂದು ಕೆಟ್ಟ ಸಾಮಾಜಿಕ ಪಿಡುಗು ಎಂದು ಹೇಳಿದ್ದರು.