ಸಾಂದರ್ಭಿಕ ಚಿತ್ರ
ದೇಶ
ಜಾರ್ಖಂಡ್ ನಲ್ಲಿ ನಕ್ಸಲರಿಂದ ತಂದೆ, ಮಗನ ಹತ್ಯೆ
ಮಾವೋವಾದಿಗಳು ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಸೋಮವಾರ ತಡರಾತ್ರಿ 50 ವರ್ಷದ ವ್ಯಕ್ತಿ ಹಾಗೂ....
ಮೇದಿನಿನಗರ: ಮಾವೋವಾದಿಗಳು ಜಾರ್ಖಂಡ್ ನ ಪಲಮು ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಸೋಮವಾರ ತಡರಾತ್ರಿ 50 ವರ್ಷದ ವ್ಯಕ್ತಿ ಹಾಗೂ ಆತನ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಔರಂಗಬಾದ್ ಜಿಲ್ಲೆಯಿಂದ ಆಗಮಿಸಿದ್ದ ಸುಮಾರು 20 ನಕ್ಸಲರ ತಂಡವೊಂದು, ಜಾರ್ಖಂಡ್ ನ ಕೌಲುವಾ ಗ್ರಾಮದ ನಿವಾಸಿ ಶಿವನಾಥ್ ಯಾದವ್ ಹಾಗೂ ಅವರ ಪುತ್ರ ಗುಡ್ಡು ಯಾದವ್ ಅವರನ್ನು ಮನೆಯಿಂದ ಹೊರಗೆ ಎಳೆದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಅವರು ಹೇಳಿದ್ದಾರೆ.
ಗ್ರಾಮದ ಜನರಲ್ಲಿ ಭಯ ಹುಟ್ಟಿಸುವುದಕ್ಕಾಗಿ ನಕ್ಸಲರು ಈ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಂದ್ರಜೀತ್ ಮಹತಾ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ನಕ್ಸಲರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ