
ನವದೆಹಲಿ: ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೋತ್ತರ ಸಮೀಕ್ಷೆಗಳಂತೆ ಬಿಜೆಪಿ ಗೆಲುವು ಸಾಧಿಸಿದ್ದೇ ಆದರೆ ತಾವು ಮತ್ತೆ ಚಳವಳಿ ಕೂರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಸತ್ಯಾಗ್ರಹ ಆರಂಭಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದೀಗ ಮತ್ತೆ ಅಂತಹುದೇ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ ಭಾನುವಾರ ಮುಕ್ತಾಯಗೊಂಡ ಎಂಸಿಡಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿದ್ದೇ ಆದರೆ ತಾವು ಅಕ್ರಮ ಚುನಾವಣೆ ವಿರುದ್ಧ ಚಳವಳಿ ಅರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎಂಸಿಡಿ ಚುನಾವಣೆಗೂ ಮೊದಲೇ ಮತಯಂತ್ರಗಳಲ್ಲಿ ದೋಷವಿದೆ ಎಂದು ಆರೋಪಿಸಿದ್ದ ಸಿಎಂ ಕೇಜ್ರಿವಾಲ್ ಇದೀಗ ಚುನಾವಣೆಯಲ್ಲಿ ಬಿಜೆಪಿ ಗಲುವು ಸಾಧಿಸಿದರೆ ಮತ್ತೆ ಸತ್ಯಾಗ್ರಹ ಕೂರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, "ಮತ್ತೆ ಚಳವಳಿ ನಡೆಸಲು ಆಪ್ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರವಿಲ್ಲ. ಏಕೆಂದರೆ ಚಳವಳಿಯಿಂದಾಗಿ ಆಮ್ ಆದ್ಮಿ ಪಕ್ಷ ಜನಿಸಿದ್ದು. ಉತ್ತರ ಪ್ರದೇಶ, ಪಂಜಾಬ್ ವಿಧಾನಸಭೆ ಹಾಗೂ ಮುಂಬೈ ಮತ್ತು ಪುಣೆ ಮಹಾನಗರ ಪಾಲಿಕೆಗಳಲ್ಲಿ ನಡೆದಂತೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಫಲಿತಾಂಶ ಪ್ರಕಟವಾದರೆ ಖಂಡಿತಾ ಮತ್ತೆ ಚಳವಳಿಗೆ ಮರಳಲು ಆಪ್ ಪಕ್ಷ ಹಿಂಜರಿಯುವುದಿಲ್ಲ. ಚುನಾವಣಾ ಸೋಲು-ಗೆಲುವು ಸಾಮಾನ್ಯವೇ ಆದರೂ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಅಂತೆಯೇ ಆಪ್ ಪಕ್ಷ ಎಂದಿಗೂ ಅಧಿಕಾರಿಕ್ಕೆ ಅಂಟಿಕೊಂಡಿಲ್ಲ. ಈಗಲೂ ಅಧಿಕಾರ ತ್ಯಜಿಸಿ ಚಳವಳಿ ನಡೆಸಲು ಪಕ್ಷ ಸಿದ್ಧವಾಗಿದೆ ಎಂದೂ ಹೇಳಿದರು.
ಇತ್ತೀಚೆಗೆ ಬಿಡುಗಡೆಯಾದ ಎರಡು ಚುನಾವಣೋತ್ತರ ಮತದಾನ ಸಮೀಕ್ಷೆಯಲ್ಲಿ ಬಿಜೆಪಿಗೆ ಗೆಲುವು ದೊರೆಯಲಿದೆ ಎಂದು ಹೇಳಲಾಗಿತ್ತು. ಒಟ್ಟು 270 ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ 200ಸದಸ್ಯ ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿತ್ತು.
Advertisement