ಕುಪ್ವಾರ: ಕಲ್ಲುತೂರಾಟಗಾರರ ಮೇಲೆ ಗುಂಡು ಹಾರಿಸಿದ ಸೇನೆ, ಓರ್ವ ನಾಗರಿಕ ಸಾವು, 3 ಗಾಯ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆಸಲಾಗುತ್ತಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು ತೂರಾಟಗಾರರನ್ನು ನಿಯಂತ್ರಿಸುವ ಸಲುವಾಗಿ ಸೇನಾ ಪಡೆ ನಡೆಸಿದ ಗುಂಡಿನ ದಾಳಿ ವೇಳೆ ಓರ್ವ ನಾಗರಿಕ ಸಾವನ್ನಪ್ಪಿದ್ದಾನೆಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕುಪ್ವಾರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆಸಲಾಗುತ್ತಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು ತೂರಾಟಗಾರರನ್ನು ನಿಯಂತ್ರಿಸುವ ಸಲುವಾಗಿ ಸೇನಾ ಪಡೆ ನಡೆಸಿದ ಗುಂಡಿನ ದಾಳಿ ವೇಳೆ ಓರ್ವ ನಾಗರಿಕ ಸಾವನ್ನಪ್ಪಿದ್ದಾನೆಂದು ಮೂಲಗಳು ತಿಳಿಸಿವೆ. 
ಕುಪ್ವಾರ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿ, ಐವರು ಯೋಧರಿಗೆ ಗಾಯವಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದಿದ್ದ ಸೇನಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. 
ಕಾರ್ಯಾಚರಣೆ ಪ್ರಗತಿಯಲ್ಲಿರಬೇಕಾದರೆ ಸ್ಥಳಕ್ಕೆ ಬಂದ ಗುಂಪೊಂದು ಹತ್ಯೆಯಾದ ಉಗ್ರರ ಮೃತದೇಹಗಳನ್ನು ನೀಡುವಂತೆ ಆಗ್ರಹಿಸಿ ಏಕಾಏಕಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಕಲ್ಲು ತೂರಾಟಗಾರರನ್ನು ನಿಯಂತ್ರಿಸುವ ಸಲುವಾಗಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ 70 ವರ್ಷದ ವೃದ್ಧನೊಬ್ಬ ಸಾವನ್ನಪ್ಪಿ, ಮೂವರಿಗೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ. 
ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದು ಮೂವರು ಉಗ್ರರು: ಸೇನೆ 
ಕುಪ್ವಾರ ಸೇನಾ ನೆಲೆ ಮೇಲೆ ಮೂವರು ಉಗ್ರರು ದಾಳಿ ನಡೆಸಿದ್ದು, ಈಗಾಗಲೇ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೂರನೇ ಉಗ್ರನಿಗಾಗಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಸೇನೆ ಹೇಳಿದೆ. 

ದಾಳಿಕೋರರ ಗುರ್ತಿಕೆಯನ್ನು ಕಂಡು ಹಿಡಿಯಲಾಗಿದ್ದು, ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳನ್ನು ಗಮನಿಸಿದರೆ ದಾಳಿ ಮಾಡಿದವರು ವಿದೇಶಿ ಉಗ್ರರೆಂದು ಎನಿಸುತ್ತಿದೆ. ಸ್ಥಳದಲ್ಲಿ ಕೇವಲ ಒಂದು ಎಕೆ-47 ನ್ನು ಮಾತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದು ಸ್ಥಳದಲ್ಲಿ ಮೂವರು ಉಗ್ರರಿದ್ದರು ಎಂಬುದನ್ನು ಸೂಚಿಸುತ್ತಿದೆ. ತಲೆಮರೆಸಿಕೊಂಡಿರುವ ಮೂರನೇ ಉಗ್ರನಿಗಾಗಿ ಕಾರ್ಯಾಚರಣೆ ಮುಂದುವರೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com