ಇಸ್ಲಾಂನಲ್ಲಿ ಮುಸ್ಲಿಂ ಮಹಿಳೆಯರು 'ಥರ್ಡ್ ಕ್ಲಾಸ್ ಸ್ಟೇಟಸ್' ಹೊಂದಿದ್ದಾರೆ: ಸುಬ್ರಮಣಿಯನ್ ಸ್ವಾಮಿ

ಇಸ್ಲಾಂನಲ್ಲಿ ಲಿಂಗ ಸಮಾನತೆ ಎಂಬುದಿಲ್ಲ, ಇಸ್ಲಾಂನಲ್ಲಿ ಮುಸ್ಲಿಂ ಮಹಿಳೆಯರು 'ಥರ್ಡ್ ಕ್ಲಾಸ್ ಸ್ಟೇಟಸ್' ಹೊಂದಿದ್ದಾರೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು...
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಇಸ್ಲಾಂನಲ್ಲಿ ಲಿಂಗ ಸಮಾನತೆ ಎಂಬುದಿಲ್ಲ, ಇಸ್ಲಾಂನಲ್ಲಿ ಮುಸ್ಲಿಂ ಮಹಿಳೆಯರು 'ಥರ್ಡ್ ಕ್ಲಾಸ್ ಸ್ಟೇಟಸ್' ಹೊಂದಿದ್ದಾರೆಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶನಿವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ತ್ರಿವಳಿ ತಲಾಖ್ ಕುರಿತಂತೆ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿರುವ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು, ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳುವ ಸಲುವಾಗಿ ಮುಸ್ಲಿಂ ಪುರುಷರು ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡಿ, ಪತ್ನಿಯನ್ನು ಬದಲಾಯಿಸುತ್ತಿರುತ್ತಾರೆ. ಮಹಿಳೆಯರ ಮೇಲೆ ದೌರ್ಜನ್ಯವೆಸಗಲು ಇಸ್ಲಾಂ ಧರ್ಮವೇ ಅಲ್ಲಿನ ಪುರುಷರಿಗೆ ಅನುಮತಿಯನ್ನು ನೀಡಿದೆ. ಮುಸ್ಲಿಂ ಪುರುಷರು ಮಹಿಳೆಯರು ಮಹಿಳೆಯರ ಕೈಗೆ ಮಕ್ಕಳನ್ನು ಕೊಟ್ಟು ನಡುಬೀದಿಯಲ್ಲಿ ಕೈಬಿಟ್ಟು ಸಾಯುವಂತೆ ಮಾಡುತ್ತಿದ್ದಾರೆ. ತ್ರಿವಳಿ ತಲಾಖ್ ಕುರಿತಂತೆ ಮುಸ್ಲಿಂ ಮಹಿಳೆಯರಿಗೆ ಹೆಗಲು ಕೊಟ್ಟು ನಿಲ್ಲಬೇಕಿದೆ ಎಂದು ಹೇಳಿದ್ದರು. 
ಮೌರ್ಯ ಅವರ ಈ ಹೇಳಿಕೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಮೌರ್ಯ ಅವರು ಮುಸ್ಲಿಂ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ, ಕೂಡಲೇ ಮೌರ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಮೌರ್ಯ ಅವರಿಗೆ ಇಸ್ಲಾಂ ಬಗ್ಗೆ ಏನೇನು ಗೊತ್ತಿಲ್ಲ. ಕೂಡಲೇ ಹೇಳಿಕೆ ಕುರಿತು ಕ್ಷಮೆಯಾಚಿಸಲಿಲ್ಲ ಎಂದರೆ, ಅಗತ್ಯಬಿದ್ದರೆ, ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಾವು ಸಿದ್ಧರಿದ್ದೇವೆಂದು ಹೇಳಿತ್ತು. 
ಇದೀಗ ಮೌರ್ಯ ಈ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿಯವರು ಬೆಂಬಲ ವ್ಯಕ್ತಪಡಿಸಿದ್ದು, ಮೌರ್ಯ ಅವರ ಹೇಳಿಕೆ ಸರಿಯಿದೆ. ಇಸ್ಲಾಂ ಧರ್ಮದಲ್ಲಿ ಲಿಂಗ ಸಮಾನತೆ ಎಂಬುದಿಲ್ಲ. ಇಸ್ಲಾಂನಲ್ಲಿ ಮಹಿಳೆಯರು ಥರ್ಡ್ ಕ್ಲಾಸ್ ಸ್ಟೇಟಸ್ (ಕೀಳುಮಟ್ಟದ ಸ್ಥಾನಮಾನ) ಹೊಂದಿದ್ದಾರೆಂದು ಹೇಳಿದ್ದಾರೆ. 
ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವವರು ಹಾಗೂ ಬೋಧಿಸುತ್ತಿರುವವರು ಮಹಿಳೆಯರಿಗೆ ಎರಡನೇ ಹಾಗೂ ಮೂರನೇ ಸ್ಥಾನ (ಧರ್ಡ್ ಕ್ಲಾಸ್ ಸ್ಟೇಟಸ್)ವನ್ನು ನೀಡಿದ್ದಾರೆ. ಇದರಲ್ಲಿ ಸಂಶಯವೇ ಇಲ್ಲ. ನಾಲ್ವರು ಪತ್ನಿಯರನ್ನು ವಿವಾಹವಾಗುವ ಸಂಪ್ರದಾಯ ತ್ರಿವಳಿ ತಲಾಖ್'ನ್ನೇ ಇದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿ ನೋಡಬಹುದು ಎಂದು ತಿಳಿಸಿದ್ದಾರೆ. 
ಮೌರ್ಯ ಅವರ ಹೇಳಿಕೆ ಸರಿಯಿದೆ, ಮಹಿಳೆಯ ಮೇಲೆ ದೌರ್ಜನ್ಯವೆಸಗಲು ಇಸ್ಲಾಂ ಧರ್ಮವೇ ಅಲ್ಲಿನ ಪುರುಷರಿಗೆ ಅನುಮತಿ ನೀಡಿದೆ. ಮೌಲ್ವಿಗಳು ಸತ್ಯವನ್ನು ಮರೆಮಾಚುತ್ತಿದ್ದಾರೆ. ಆದರೆ, ಮುಸ್ಲಿಂ ಧರ್ಮದ ಸತ್ಯಾಂಶವೇ ಇದು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com