ಕುಡುಕ ಗಂಡನಿಗೆ ದಂಡ ಪ್ರಯೋಗಿಸಲು ವಧುಗಳಿಗೆ ಬ್ಯಾಟ್ ಗಿಫ್ಟ್!

ನವ ದಂಪತಿಗಳಿಗೆ ಸಾಮಾನ್ಯವಾಗಿ ಏನು ಉಡುಗೊರೆ ಕೊಡುತ್ತೇವೆ? ಒಡವೆ, ವಸ್ತ್ರ, ಮನೆ ಸಾಮಾನು, ಪಾತ್ರೆಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭೋಪಾಲ್: ನವ ದಂಪತಿಗಳಿಗೆ ಸಾಮಾನ್ಯವಾಗಿ ಏನು ಉಡುಗೊರೆ ಕೊಡುತ್ತೇವೆ? ಒಡವೆ, ವಸ್ತ್ರ, ಮನೆ ಸಾಮಾನು, ಪಾತ್ರೆ, ಅಲಂಕಾರಿಕ ವಸ್ತುಗಳು ಇತ್ಯಾದಿಯಲ್ಲವೇ? 
ಮಧ್ಯಪ್ರದೇಶದ ಸಚಿವರೊಬ್ಬರು ನವದಂಪತಿಗಳಿಗೆ ನೀಡಿದ ಉಡುಗೊರೆ ಕೇಳಿದರೆ ನಿಮಗೆ ನಗು ಬರುವುದಂತೂ ಗ್ಯಾರಂಟಿ. ಸಾಮೂಹಿಕ ಮದುವೆ ಸಮಾರಂಭದಲ್ಲಿ ಅವರು ಸುಮಾರು 700 ಮಂದಿ ವಧುಗಳಿಗೆ ಮೊಗ್ರಿ ಅಥವಾ ಮರದ ಬ್ಯಾಟುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. 
ಮೊಗ್ರಿಯನ್ನು ಸಾಂಪ್ರದಾಯಿಕವಾಗಿ ಬಟ್ಟೆಗಳನ್ನು ತೊಳೆಯಲು ಬಳಸುತ್ತಿದ್ದರೆ ಇಲ್ಲಿ ಸಚಿವರು ವಧುಗಳಿಗೆ ತಮ್ಮ ಗಂಡಂದಿರ ಮೇಲೆ ಪ್ರಯೋಗ ಮಾಡಲು ಹೇಳಿದ್ದಾರೆ. ಪತಿ ಮದ್ಯ ವ್ಯಸನಿಯಾದರೆ, ಹಿಂಸೆ ನೀಡಿದರೆ ಅಥವಾ ಹೇಳಿದ ಮಾತು ಕೇಳದಿದ್ದರೆ ಗಂಡಂದಿರನ್ನು ಬಗ್ಗಿಸಲು ಬ್ಯಾಟಿನಿಂದ ದಂಡ ಪ್ರಯೋಗ ಮಾಡಲು ಹೇಳಿದ್ದಾರೆ.
ಉಡುಗೊರೆಯಾಗಿ ನೀಡಿದ ಮೊಗ್ರಿಯಲ್ಲಿ ಈ ರೀತಿ ಬರೆಯಲಾಗಿದೆ: ಕುಡುಕರನ್ನು ಹೊಡೆಯಲು ಬಳಸಿ, ಪೊಲೀಸರು ಏನೂ ಮಾಡುವುದಿಲ್ಲ, ಮಧ್ಯ ಪ್ರವೇಶಿಸುವುದಿಲ್ಲ ಎಂದು ಬರೆಯಲಾಗಿದೆ.
ಮಧ್ಯ ಪ್ರದೇಶದ ಪಂಚಾಯತ್ ರಾಜ್ ಸಚಿವ ಗೋಪಾಲ್ ಭಾರ್ಗವ್ ಈ ಬ್ಯಾಟ್ ಗಳನ್ನು ನೀಡಿದ್ದು ನಿನ್ನೆ ಸಾಗರ್ ಜಿಲ್ಲೆಯ ಗರ್ಹಕೋಟದಲ್ಲಿ ಅಕ್ಷಯ ತೃತೀಯದಂದು ಸಾಮೂಹಿಕ ಮದುವೆ ಸಮಾರಂಭ ನಡೆದಿತ್ತು. 
ತಮ್ಮ ಕ್ಷೇತ್ರದ ಮಹಿಳೆಯರು ನನ್ನ ಬಳಿ ಬಂದು ಪತಿ ಹಿಂಸೆ ನೀಡುತ್ತಾರೆ, ಕುಡಿದು ಬಂದು ಗಲಾಟೆ ಮಾಡುತ್ತಾರೆ, ಹೊಡೆಯುತ್ತಾರೆ, ಏನಾದರೂ ಕ್ರಮ ಕೈಗೊಳ್ಳಿ ಎಂದು ದೂರು ಹೊತ್ತುಕೊಂಡು ಬರುತ್ತಾರೆ. ಕೆಲವೊಮ್ಮೆ ಮಹಿಳೆಯರು ದುಡಿದ ಹಣವನ್ನು ಕೂಡ ಅವರ ಗಂಡಂದಿರು ಕಿತ್ತುಕೊಳ್ಳುತ್ತಾರಂತೆ. ಒಮ್ಮೆ ಮಹಿಳೆಯೊಬ್ಬರು ನನ್ನ ಬಳಿ ಬಂದು ತಮ್ಮ ಗಂಡ ವಿಪರೀತ ಕುಡಿಯುತ್ತಾರೆ, ಅವರ ಕುಡಿತವನ್ನು ಬಿಡಿಸಲು ಈ ಮೊಗ್ರಿಯಲ್ಲಿ ಹೊಡೆದರೆ ಆದೀತೆ ಎಂದು ನನ್ನನ್ನು ಕೇಳಿದಳು. ಆಗ ನನ್ನ ಮನಸ್ಸಿನಲ್ಲಿ ಹೌದು ಇದು ಒಳ್ಳೆಯ ಮಾರ್ಗ ಅನ್ನಿಸಿತು. ಹೀಗಾಗಿ ಮಹಿಳೆಯರಿಗೆ ಉಡುಗೊರೆ ಕೊಡಲು 10,000 ಬ್ಯಾಟುಗಳಿಗೆ ಆರ್ಡರ್ ಮಾಡಿದೆ ಎಂದು ಸಚಿವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದರಿಂದ ಯಾವುದೇ ತಪ್ಪು ಇಲ್ಲ. ಸಮಾಜದಲ್ಲಿನ ಜನರ ಮನಸ್ಥಿತಿಯನ್ನು ಬದಲಾಯಿಸಲು, ಪುರುಷರು ಕುಡಿತದ ಚಟ ಬಿಡಲು ಇದು ಉತ್ತಮ ಸಾಧನ ಎಂದು ಅವರು ಭಾವಿಸಿದ್ದಾರೆ.
ಪುರುಷರ ಕುಡಿತದ ಸಮಸ್ಯೆಯನ್ನು ಸರ್ಕಾರ ಮತ್ತು ಪೊಲೀಸರಿಂದ ಮಾತ್ರ ಬಿಡಿಸಲು ಸಾಧ್ಯವಿಲ್ಲ. ಜನರೇ ಸ್ವ ಇಚ್ಛೆಯಿಂದ ಚಟವನ್ನು ಬಿಟ್ಟುಬಿಡಬೇಕು. ಸಾಮೂಹಿಕವಾಗಿ ಜನರು ಮುಂದೆ ಬಂದರೆ ಈ ಸಮಸ್ಯೆಯನ್ನು ಬಗೆಹರಿಸಬಹುದು. ಅಕ್ರಮ ಲಿಕ್ಕರ್ ಮಾರಾಟ ಪ್ರತಿ ರಾಜ್ಯದ ಮುಖ್ಯ ಸಮಸ್ಯೆಯಾಗಿದೆ. ಜನರು ಮನಸ್ಸು ಮಾಡದಿದ್ದರೆ ಪರಿಸ್ಥಿತಿ ಬದಲಾಗದು ಎಂದು ಸಚಿವ ಭಾರ್ಗವ ಹೇಳುತ್ತಾರೆ.
ಆರಂಭದಲ್ಲಿ ಕುಡಿತದಿಂದಾಗುವ ಸಮಸ್ಯೆ ಬಗ್ಗೆ ಮಹಿಳೆಯರು ತಮ್ಮ ಮನೆಯಲ್ಲಿನ ಪುರುಷರಿಗೆ ಮನವರಿಕೆ ಮಾಡಲು ನೋಡಿ. ಅದಕ್ಕೆ ಬಗ್ಗದಿದ್ದರೆ ದಂಡ ಪ್ರಯೋಗಿಸಿ ಎನ್ನುತ್ತಾರೆ ಅವರು. 
ಭಾರ್ಗವ್ ಕಳೆದ ಕೆಲ ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬರುತ್ತಿದ್ದಾರೆ. ಮತ್ತು ಹಳ್ಳಿಗಳ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬದಲಾಗಲು ಶಿಕ್ಷಣವಂತರಾಗಬೇಕೆಂದು ಪ್ರಚಾರ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com