ಪ್ರಸ್ತಾವನೆಯಂತೆ ಏಕಕಾಲಕ್ಕೆ ಚುನಾವಣೆ ನಡೆಸಬೇಕೆಂದರೆ ಕೆಲವೊಂದು ರಾಜ್ಯಗಳಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಸಬೇಕಾಗುತ್ತದೆ, ಇನ್ನು ಕೆಲವು ರಾಜ್ಯಗಳಲ್ಲಿ ಅವಧಿಯನ್ನು ವಿಸ್ತರಿಸಬೇಕಾಗುತ್ತದೆ ಎಂದು ನೀತಿ ಆಯೋಗ ಹೇಳಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ವಿಷಯದಲ್ಲಿ ಚುನಾವಣಾ ಆಯೋಗವನ್ನು ನೋಡಲ್ ಸಂಸ್ಥೆಯನ್ನಾಗಿ ಮಾಡಲಾಗಿದ್ದು, ಮಾರ್ಗಸೂಚಿಯನ್ನು ನಿರ್ಧರಿಸಲು ಸಂಬಂಧಿಸಿದ ಅಧಿಕಾರಿಗಳ ತಂಡವನ್ನು ರಚಿಸುವಂತೆ ನೀತಿ ಆಯೋಗ ಸಲಹೆ ನೀಡಿದೆ. ಆರು ತಿಂಗಳೊಳಗಾಗಿ ಈ ಬಗ್ಗೆ ವರದಿಯೊಂದು ಅಂತಿಮಗೊಳ್ಳಬೇಕಿದ್ದು, ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ 2018 ರ ಮಾರ್ಚ್ ವೇಳೆಗೆ ನೀಲನಕ್ಷೆ ರೂಪುಗೊಂಡಿರುತ್ತದೆ. ಏಕಕಾಲಕ್ಕೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಸುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾವನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದರು.