ಶ್ರೀನಗರ: ಕಾಶ್ಮೀರದ ಭದ್ರತಾ ಪಡೆಗಳಿಂದ ಹತ್ಯೆಯಾದ ಲಷ್ಕರ್-ಇ-ತೊಯ್ಬಾ ಕಮಾಂಡರ್ ಅಬು ದುಜಾನಾ ಮೃತದೇಹವನ್ನು ಸ್ಪೀಕರಿಸಲು ಪಾಕಿಸ್ತಾನ ಸರ್ಕಾರ ನಿರಾಕರಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಪಾಕಿಸ್ತಾನ ಪ್ರಜೆಯಾಗಿರುವ ಉಗ್ರ ಅಬು ದುಜಾನಾ ಮೃತದೇಹವನ್ನು ಆತನ ಹೆತ್ತವರಿಗಾಗಿ ಸ್ವೀಕರಿಸುವಂತೆ ಭಾರತೀಯ ಅಧಿಕಾರಿಗಳು ಇದೇ ಮೊದಲ ಬಾರಿಗೆ ದೆಹಲಿಯಲ್ಲಿನ ಪಾಕಿಸ್ತಾನ ರಾಯಭಾರಿಗಳಿಗೆ ಸೂಚನೆ ನೀಡಿತ್ತು.
ಅಬು ದುಜಾನಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ಥಾನ್ ಗೆ ಸೇರಿದವನಾಗಿದ್ದಾನೆ. ಪಾಕಿಸ್ತಾನ ಸರ್ಕಾರ ಮೃತದೇಹ ಸ್ವೀಕರಿಸಲು ನಕಾರ ವ್ಯಕ್ತಪಡಿಸಿದ್ದೇ ಆದರೆ, ಆತನ ದಫನ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಹೇಳಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಸರ್ಕಾರ, ಮೃತದೇಹ ಸ್ವೀಕರಿಸಲು ನಕಾರ ವ್ಯಕ್ತಪಡಿಸಿದೆ. ಅಲ್ಲದೆ, ಅಬು ದುಜಾನಾ ತಮ್ಮ ದೇಶದ ಪ್ರಜೆಯಲ್ಲ ಎಂದು ಹೇಳಿಕೊಂಡಿದೆ.