ಎನ್ ಕೌಂಟರ್ ವೇಳೆ ಸೇನಾಧಿಕಾರಿಗಳೊಂದಿಗೆ ದೂರವಾಣಿ ಕರೆ ಮುಖಾಂತರ ಉಗ್ರ ಅಬು ದುಜಾನಾ ಮಾತುಕತೆ ನಡೆಸಿದ್ದಾನೆ. ಮಾತುಕತೆ ವೇಳೆ ಸಮಾಧಾನದಿಂದಲೇ ಮಾತನಾಡಿರುವ ದುಜಾನ್, ಸೇನಾಧಿಕಾರಿಯನ್ನು ಹೇಗಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರ ನೀಡಿರುವ ಅಧಿಕಾರಿ, ನೀನೇಕೆ ಶರಣಾಗಬಾರದು?... ಯುವತಿಯೊಬ್ಬಳನ್ನು ವಿವಾಹವಾಗಿರುವೆ...ನೀನು ಮಾಡುತ್ತಿರುವುದು ಸರಿಯಲ್ಲ. ಕಾಶ್ಮೀರಿಗರನ್ನು ಹಿಂಸಿಸುವ ಸಲುವಾಗಿ ಪಾಕಿಸ್ತಾನ ಸಂಸ್ಥೆಗಳು ನಿನ್ನನ್ನು ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ದುಜಾನಾ, ನಾನು ಮನೆ ಬಿಟ್ಟಿದ್ದೇ ಹುತಾತ್ಮನಾಗುವ ಸಲುವಾಗಿ. ನಾನೇನು ಮಾಡಲಿ? ಯಾರಿಗೆ ಆಟವಾಡಬೇಕು ಎಂದೆನಿಸುತ್ತದೆಯೇ ಅವರು ಆಟವಾಡಲಿ. ಕೆಲವೊಮ್ಮೆ ನಾವು ಮುಂದೆ ಇರುತ್ತೇವೆ... ಕೆಲವೊಮ್ಮೆ ನೀವು... ಇಂದು ನೀವು ನನ್ನನ್ನು ಹಿಡಿದಿದ್ದೀರ. ನಿಮಗೆ ಅಭಿನಂದನೆಗಳನ್ನು ಹೇಳುತ್ತೇನೆ. ಇದೀಗ ನೀವು ಏನು ಬೇಕಾದರೂ ಮಾಡಿ. ಆದರೆ, ನಾನು ಮಾತ್ರ ಶರಣಾಗುವುದಿಲ್ಲ. ನನ್ನ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗುತ್ತದೆ. ಅಲ್ಲಾಹ್ ಬರೆದಿದ್ದೇ ಆಗುತ್ತದೆ ಎಂದಿದ್ದಾನೆ.
ಪೋಷಕರನ್ನು ನೆನಪಿಸುವ ಮೂಲಕ ಮತ್ತೆ ದುಜಾನಾ ಮನವೊಲಿಸಲು ಅಧಿಕಾರಿಗಳು ಯತ್ನ ನಡೆಸಿದಾಗ ಪ್ರತಿಕ್ರಿಯೆ ನೀಡಿರುವ ಉಗ್ರ, ಜಿಹಾದ್ ಗಾಗಿ ನಾನು ಗಿಲ್ಗಿಟ್-ಬಾಲ್ಟಿಸ್ತಾನ್ ಬಿಟ್ಟಿದ್ದೆ. ನಾನು ಮನೆಯಿಂದ ಹೊರ ಬಂದಾಗಲೇ ನನ್ನ ತಂದೆ ತಾಯಿ ಸತ್ತು ಹೋದರು ಎಂದು ತಿಳಿಸಿದ್ದಾನೆ.
ಪಾಕಿಸ್ತಾನ ಮೂಲದ ಉಗ್ರರ ರಕ್ತದೊಂದಿಗೆ ರಕ್ತದೋಕುಳಿ ಆಡುವುದು ನಮಗೆ ಇಷ್ಟವಿಲ್ಲ. ಅಲ್ಲಾಹ್ ಎಲ್ಲರಿಗೂ ಒಬ್ಬನೇ ಎಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ದುಜಾನಾ, ಅಲ್ಲಾಹ್ ಎಲ್ಲರಿಗೂ ಒಬ್ಬನೇ ಆಗಿದ್ದರೆ, ಮನೆಯೊಳಗೆ ಬಂದು ನನ್ನನ್ನು ಭೇಟಿ ಮಾಡಿ ಎಂದಿದ್ದಾನೆ.
ನಂತರ ಅಧಿಕಾರಿ ಹಲವು ಬಾರಿ ಮಾತನಾಡಿದರೂ ದುಜಾನಾ ಮಾತ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಶ್ಮೀರಿಗರನ್ನು ರಕ್ಷಣೆ ಮಾಡಿ, ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡುವುದನ್ನು ನಿಲ್ಲಿಸಿ, ಶರಣಾಗಿ ವಿಚಾರಣೆ ಎದುರಿಸು ಎಂದು ಅಧಿಕಾರಿ ಹಲವು ಬಾರಿ ಮನವಿ ಮಾಡಿದರೂ ದುಜಾನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಮ್ಮೆ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಿಲ್ಲ. ಹಲವು ಬಾರಿ ಶರಣಾಗುವಂತೆ ಮನವಿ ಮಾಡಿದರೂ ಅಬು ದುಜಾನಾ ಮಾತ್ರ ಯಾವುದಕ್ಕೂ ಬಗ್ಗದೇ ಹೋದ ಕಾರಣ ಸೇನಾಪಡೆ ಯಾವುದೇ ದಾರಿಯಿಲ್ಲದೆ ಎನ್ ಕೌಂಟರ್ ನಡೆಸಿ ಕೊನೆಗೂ ವೋಸ್ಟ್ ವಾಟೆಂಡ್ ಉಗ್ರನನ್ನು ಹತ್ಯೆ ಮಾಡಿತು.
ಅಬು ದುಜಾನ್ ನನ್ನು ಬಂಧನಕ್ಕೊಳಪಡಿಸಲು ಭಾರತದ ಅಧಿಕಾರಿಗಳು ಹಲವಾರು ತಿಂಗಳುಗಳಿಂದ ಪ್ರಯತ್ನ ನಡೆಸುತ್ತಲೇ ಇದ್ದರು. ಚಾಲಾಕಿಯಾಗಿದ್ದ ಅಬು ದುಜಾನ್ ಒಂದಲ್ಲ ಒಂದು ರೀತಿಯಲ್ಲಿ ತಪ್ಪಿಸಿಕೊಳ್ಳುತ್ತಲೇ ಇದ್ದ. ಎನ್ ಕೌಂಟರ್ ನಡೆದ ದಿನ ತನ್ನ ಪತ್ನಿಯನ್ನು ನೋಡುವ ಸಲುವಾಗಿ ದುಜಾನಾ ಕಾಶ್ಮೀರದ ಮನೆಯೊಂದಕ್ಕೆ ಬಂದಿದ್ದ. ಈ ವೇಳೆ ಎನ್ ಕೌಂಟರ್ ನಡೆಸಿದ್ದ ಸೇನಾ ಪಡೆ ಅಬು ದುಜಾನಾನನ್ನು ಹತ್ಯೆ ಮಾಡಿತ್ತು.
ಹತ್ಯೆಯಾಗಿರುವ ಅಬು ದುಜಾನಾ ಸಿಆರ್'ಪಿಎಫ್ ಪಡೆಯ ಮೇಲೆ ದಾಳಿ ನಡೆಸಿ 8 ಮಂದಿಯನ್ನು ಹತ್ಯೆ ಮಾಡಿದ್ದ. ಈ ಪ್ರಕರಣ ಸೇರಿದಂದೆ ಹಲವಾರು ಪ್ರಕರಣಗಳಲ್ಲಿ ಈತ ಮೋಸ್ಟ್ ವಾಟೆಂಡ್ ಉಗ್ರನಾಗಿದ್ದ.