ನವದೆಹಲಿ: ಜಮ್ಮು-ಕಾಶ್ಮೀರದೊಳಗೆ ಉಗ್ರರನ್ನು ತಳ್ಳಲು ಪಾಕಿಸ್ತಾನ ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿರುವ ರಕ್ಷಣಾ ಸಚಿವ ಅರುಣ್ ಜೇಟ್ಲಿ, ಗಡಿಯಲ್ಲಿ ನುಸುಳುವಿಕೆಯನ್ನು ತಡೆಗಟ್ಟಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತಿಯ ಸೇನೆ ಪಶ್ಚಿಮದ ಗಡಿಯಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ಸಂಸತ್ ಗೆ ತಿಳಿಸಿದ್ದಾರೆ.
ಪಾಕಿಸ್ತಾನ ಉಗ್ರರನ್ನು ಕಾಶ್ಮೀರದ ಗಡಿಯೊಳಗೆ ತಳ್ಳುವ ಯತ್ನವನ್ನು ಹೆಚ್ಚಿಸಿದೆ. ಆದರೆ ಭದ್ರತಾ ಪಡೆಗಳ ಕಾರ್ಯಾಚರಣೆಯಿಂದಾಗಿ ಒಳನುಸುಳುವಿಕೆ ಯತ್ನಗಳು ವಿಫಲವಾಗಿವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 2016 ರಲ್ಲಿ ಪಾಕಿಸ್ತಾನ 228 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದರೆ 2017 ರಲ್ಲಿ ಈ ವರೆಗೆ 285 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಗಡಿಯನ್ನು ಸುರಕ್ಶಿತಗೊಳಿಸುವ ಪ್ರಕ್ರಿಯೆ ನಿರಂತರವಾದದ್ದು, ಗಡಿಯಲ್ಲಿ ಒಳನುಸುಳುವಿಕೆಯನ್ನು ತಡೆಗಟ್ಟಲು ಸಹಕಾರಿಯಾಗಿರುವ ತಾಂತ್ರಿಕ ಗ್ಯಾಜೆಟ್ಗಳನ್ನು ಅಳವಡಿಸಲಾಗುತ್ತಿದ್ದು, ಒಳನುಸುಳುವಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.