ಧನೇರಾ(ಗುಜರಾತ್): ಪ್ರವಾಹ ಪೀಡಿತ ಧನೇರಾ ಪಟ್ಟಣಕ್ಕೆ ಭೇಟಿ ನೀಡಿದ್ದಾಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜನರ ಹಸಿವಿನಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಗುಜರಾತ್ ನ ಬನಾಸ್ ಕಾಂತಾ ಜಿಲ್ಲೆಯ ಪ್ರವಾಹ ಪೀಡಿತ ಧನೇರಾಗೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕಾರಿನ ಮೇಲೆ ಬಿಜೆಪಿ ಗೂಂಡಾಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ಧ ಗುಡುಗಿದೆ.
ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು ಹಸಿವಿನಿಂದ ಕಂಗಾಲಾಗಿದ್ದಾರೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ರಾಹುಲ್ ಗಾಂಧಿ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಫೋಟೋಗೆ ಪೋಸ್ ಕೊಟ್ಟು ಜನರ ಹಸಿವಿನೊಂದಿಗೆ ರಾಜಕೀಯ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರ ಆರೋಪಿಸಿದ್ದಾರೆ.
ದೇವರ ದಯೆ, ಕಾಂಗ್ರೆಸ್ ಸಾಮಾನ್ಯ ಜನರನ್ನು ಗೂಂಡಾಗಳು ಎಂದು ಕರೆದಿಲ್ಲ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಗೂಂಡಾಗಳು ಎಂದು ಕರೆಯಬೇಡಿ. ಹಸಿವಿನಿಂದ ಕಂಗಾಲಾಗಿರುವ ಜನರ ಭಾವನೆಯೊಂದಿಗೆ ಆಟವಾಡಬೇಡಿ ಎಂದು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗೆ ಗುಜರಾತ್ ಬಿಜೆಪಿ ಶಾಸಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಆದರೆ ಗುಜರಾತ್ ನ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಸಂಬಿತ್ ಪತ್ರ ಆರೋಪಿಸಿದ್ದಾರೆ.