ಸಹೋದರ-ಸಹೋದರಿಯರ ಹಬ್ಬವಾಗಿರುವ ರಕ್ಷಾ ಬಂಧನ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶ ವಾರಣಾಸಿಯ ಮುಸ್ಲಿಂ ಮಹಿಳೆಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ವಿಶೇಷ ರಾಖಿಗಳನ್ನು ತಯಾರಿಸಿದ್ದಾರೆ.
ದಾರ ಹಾಗೂ ಮುತ್ತುಗಳಿಂದ ರಾಖಿಗಳನ್ನು ಸಿದ್ಧಪಡಿಸಿರುವ ಮುಸ್ಲಿಂ ಮಹಿಳೆಯರು ಅವುಗಳ ಮೇಲೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರು ಭಾವಚಿತ್ರಗಳನ್ನು ಅಂಟಿಸಿದ್ದಾರೆ. ಈ ವಿಶೇಷ ರಾಖಿಗಳನ್ನು ರಕ್ಷಾ ಬಂಧನದ ದಿನದಂದು ಯೋಗಿ ಆದಿತ್ಯನಾಥಅ ಹಾಗೂ ಮೋದಿಯವರಿಗೆ ಕಳುಹಿಸಲು ಮಹಿಳೆಯರು ನಿರ್ಧರಿಸಿದ್ದಾರೆ.
ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಯೋಗಿ ನೇತೃತ್ವದ ಉತ್ತರಪ್ರದೇಶ ಸರ್ಕಾರ ಮುಸ್ಲಿ ಮಹಿಳೆಯರ ದನಿಯಾಗಿ ನಿಂತು ತ್ರಿವಳಿ ತಲಾಖ್ ವಿರುದ್ಧ ದನಿ ಎತ್ತಿರುವುದಕ್ಕೆ ಮುಸ್ಲಿಂ ಮಹಿಳೆಯಲು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಪ್ರಧಆನಿ ಮೋದಿಯವರು ಮುಸ್ಲಿಂ ಮಹಿಳೆಯರ ಸುರಕ್ಷತೆಗಾಗಿ ಶ್ರಮ ಪಡುತ್ತಿದ್ದಾರೆ, ಮತ್ತೊಂದೆಡೆ ಯೋಗಿ ಆದಿತ್ಯನಾಥ್ ಅವರು ಮುಸ್ಲಿಂ ಮಹಿಱೆಯರ ಮದುವೆಯ ನೋಂದಾವಣಿ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ಮಹಿಳೆಯರು ಕೊಂಡಾಡಿದ್ದಾರೆ.
ತ್ರಿವಳಿ ತಲಾಖ್ ವಿರುದ್ಧದ ನಮ್ಮ ಹೋರಾಟಕ್ಕೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರು ನಮಗೆ ಬೆಂಬಲ ನೀಡಿದ್ದಾರೆ. ಸಹೋದರರಂತೆ ನಿಂದೂ ಉತ್ತಮ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ಸಹೋದರಿಯರಾಗಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಸಹೋದರರಾಗಿರುವ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ರಾಖಿಗಳನ್ನು ರವಾನಿಸುತ್ತಿದ್ದೇವೆಂದು ಮಹಿಳೆಯರು ಹೇಳಿದ್ದಾರೆ.
ನಮ್ಮ ಸಹೋದರರರು ಮುಂದೆ ಕೂಡ ಭವಿಷ್ಯದಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆಂದು ವಿಶ್ವಾಸವಿದೆ. ಮೋದಿ ಹಾಗೂ ಯೋಗಿ ಇಬ್ಬರೂ ಇದೇ ರೀತಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಲಿ ಎಂದು ಅಲ್ಲಾಹ್ ಬಳಿ ಪ್ರಾರ್ಥನೆ ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ.
ಸಹೋದರ-ಸಹೋದರಿಯರ ಬಂಧವನ್ನು ಪ್ರತಿನಿಧಿಸುವ ರಾಖಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ರಕ್ಷಾ ಬಂಧನದ ಹಬ್ಬವನ್ನು ಹೆಚ್ಚಾಗಿ ಹಿಂದೂಗಳೇ ಆಚರಿಸುತ್ತಾರೆ. ಹಬ್ಬದ ಹಿನ್ನಲೆಯಲ್ಲಿ ಮಹಿಳೆಯರು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.