
ಹಿಸಾರ್: ಪುತ್ರ ಮಾಡಿದ ಅಪರಾಧಕ್ಕೆ ತಂದೆಯನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಹೇಳಿದ್ದಾರೆ.
ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಶ್ ಬರೇಲರಾ ಪುತ್ರ ವಿಕಾಸ್ ಬರೇಲಾ(23 ವರ್ಷ) ಮತ್ತು ಆತನ ಸ್ನೇಹಿತರಾದ ಆಶಿಕ್ ಕುಮಾರ್(22 ವರ್ಷ)ಶುಕ್ರವಾರ ರಾತ್ರಿ ಯುವತಿಯೋರ್ವಳನ್ನು ತಮ್ಮ ಕಾರಿನಲ್ಲಿ ಹಿಂಬಾಲಿಸಿದ್ದರು. ಯುವಕರು ಹಿಂಬಾಲಿಸುವುದನ್ನು ಗಮನಿಸಿದ ಯುವತಿ ಭೀತಿಗೊಂಡು ಪೊಲೀಸರಿಗೆ ಕರೆ ಮಾಡಿದ್ದಳು. ಕೂಡಲೇ ಜಾಗೃತರಾಗಿದ್ದ ಪೊಲೀಸರು ಬರೇಲ ಪುತ್ರ ವಿಕಾಸ್ ಬರೇಲ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದರು.
ಬಳಿಕವಷ್ಟೇ ಆತ ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಶ್ ಬರೇಲಾ ಅವರ ಪುತ್ರ ಎಂದು ತಿಳಿದಿತ್ತು. ಯುವತಿಯ ದೂರಿನ ಪ್ರಕಾರ ಇವರಿಬ್ಬರ ವಿರುದ್ಧ ಭಾರತ ದಂಡ ಸಂಹಿತೆ 345(ಡಿ) ಮೋಟಾರು ವಾಹನ ನಿಯಮದ 185ನೆ ಕಲಂ ಪ್ರಕಾರ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ತನಿಖೆಗೆ ಆದೇಶಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಮಗ ಮಾಡಿದ ತಪ್ಪಿಗೆ ತಂದೆಯನ್ನು ಶಿಕ್ಷಿಸಲು ಸಾಧ್ಯವಿಲ್ಲ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು, ತನಿಖೆಯಲ್ಲಿ ವಿಕಾಸ್ ಬರೇಲಾ ತಪ್ಪು ಮಾಡಿದ್ದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Advertisement