ಗುಜರಾತ್ ರಾಜ್ಯಸಭೆ ಚುನಾವಣೆ: "ಕೈ"ಗೆ ಇನ್ನೂ ಸ್ಪಷ್ಟವಾಗದ ಎನ್ ಸಿಪಿ ಬೆಂಬಲ, ಪವಾರ್ ಜೊತೆ ಸೋನಿಯಾ ಭೇಟಿ ಸಾಧ್ಯತೆ!

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಕುಂಟುತ್ತಾ ಸಾಗಿದ್ದು, ಇದೀಗ ತನ್ನ ರಾಜ್ಯಸಭೆ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಪಕ್ಷ ಹೆಣಗಾಡುವಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹ್ಮದಾಬಾದ್: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಕುಂಟುತ್ತಾ ಸಾಗಿದ್ದು, ಇದೀಗ ತನ್ನ ರಾಜ್ಯಸಭೆ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಪಕ್ಷ ಹೆಣಗಾಡುವಂತಾಗಿದೆ.

ಪ್ರಮುಖವಾಗಿ ಬಿಜೆಪಿ ಆಡಳಿತವಿರುವ ಗುಜರಾತ್ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಶತಾಯಗತಾಯ ತನ್ನ ಅಭ್ಯರ್ಥಿ ಅಹ್ಮದ್ ಪಟೇಲ್ ರನ್ನು ಗೆಲ್ಲಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಅಚ್ಚರಿ  ಎಂದರೆ ಕಾಂಗ್ರೆಸ್ ಮೈತ್ರಿಕೂಟದ ಎನ್ ಸಿಪಿ ಪಕ್ಷದ ಬೆಂಬಲವೇ ಕಾಂಗ್ರೆಸ್ ಅಭ್ಯರ್ಥಿಗೆ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರು, ತಮ್ಮ ರಾಜ್ಯಸಭೆಯಲ್ಲಿ  ಯಾರನ್ನು ಬೆಂಬಲಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಂಗಳವಾರ ರಾಜ್ಯಸಭೆ ಚುನಾವಣೆ ಇದ್ದು, ಈ ಅಂತಿಮ ಕ್ಷಣದಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿ ಪರ ಮೈತ್ರಿಕೂಟದ ಪಕ್ಷಗಳ ಬೆಂಬಲವನ್ನೇ ಪಡೆಯದೇ ಇರುವುದು ನಿಜಕ್ಕೂ ಅಚ್ಚರಿ ತಂದಿದೆ. 2012ರಲ್ಲಿ ಯುಪಿಎ ಮೈತ್ರಿಕೂಟಕ್ಕೆ  ಸೇರ್ಪಡೆಯಾದ ಎನ್ ಸಿಪಿ ಗುಜರಾತ್ ನಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ. ಗುಜರಾತ್ ನಲ್ಲಿ ಒಟ್ಟು ಮೂರು ರಾಜ್ಯಸಭಾ ಸ್ಥಾನಗಳಿದ್ದು, ಬಿಜೆಪಿ ವತಿಯಿಂದ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ  ಸ್ಪರ್ಧಿಸಿದ್ದಾರೆ. ಈ ಎರಡೂ ಸ್ಥಾನಗಳ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ. ಅಂತೆಯೇ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ  ಅಹ್ಮದ್ ಪಟೇಲ್ ರನ್ನು ಆಯ್ಕೆ ಮಾಡಿದೆಯಾದರೂ ನಾಲ್ಕು ಬಾರಿ ರಾಜ್ಯಸಭೆಯಲ್ಲಿ ಗುಜರಾತ್  ಅನ್ನು ಪ್ರತಿನಿಧಿಸಿರುವ ಆಹ್ಮದ್ ಪಟೇಲ್ ಅವರಿಗೆ ಈ ಬಾರಿಯ ಚುನಾವಣೆ ಕಬ್ಬಿಣದ ಕಡಲೆಯಾಗಲಿದೆ ಎನ್ನುವುದಂತೂ ಸತ್ಯ.

ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com