ಗುಜರಾತ್ ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೆ ಅಸ್ತಿತ್ವದ ಪ್ರಶ್ನೆ, ಬಿಜೆಪಿಗೆ ಪ್ರತಿಷ್ಟೆಯ ಕಣ

ಗುಜರಾತ್‌ ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಕಣದಲ್ಲಿರುವುದು ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹ್ಮದಾಬಾದ್: ರಾಜ್ಯಸಭೆಯ ಮೂರು ಸ್ಥಾನಗಳಿಗೆ ಗುಜರಾತ್‌ ನಿಂದ ಮಂಗಳವಾರ ನಡೆಯಲಿರುವ ಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ಗೆ ಭಾರಿ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದ್ದು,  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಕಣದಲ್ಲಿರುವುದು ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೂ ಕೂಡ ರಾಜ್ಯಸಭೆಗೆ ಸ್ಪರ್ಧಿಸಿದ್ದು, ಗುಜರಾತ್ ನಲ್ಲಿ ಬಿಜೆಪಿ ಶಾಸಕರ ಬಲ ಹೆಚ್ಚಿರುವುದರಿಂದ ಈ ಇಬ್ಬರ ಗೆಲುವು ಬಹುತೇಕ ಖಚಿತ ಎಂದು  ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಪಾಲಿಗೆ ಮಾತ್ರ ರಾಜ್ಯಸಭೆ ಚುನಾವಣೆ ಈ ಹಿಂದೆಂದಿಗಿಂತಲೂ ಈ ಬಾರಿ ಕಠಿಣವಾಗಿದ್ದು, ಗುಜರಾತ್‌ನಲ್ಲಿ ಇತ್ತೀಚೆಗೆ ನಡೆದ ನಾಟಕೀಯ ರಾಜಕೀಯ ಬೆಳವಣಿಗೆಗಳಿಂದಾಗಿ  ರಾಜ್ಯಸಭೆ  ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ನ ಹಿರಿಯ ಮುಖಂಡ ಶಂಕರ ಸಿಂಹ ವಾಘೆಲಾ ಅವರ ಬಂಡಾಯ ಚುನಾವಣೆಯ ಚಿತ್ರಣವನ್ನೇ ಬದಲಿಸಿದ್ದು, ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ವಾಘೆಲಾ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರೂ ಶಾಸಕರಾಗಿ ಮುಂದುವರಿದಿದ್ದಾರೆ. ಈ ಹಿಂದೆ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್‌ ನ 57 ಸದಸ್ಯರು ಇದ್ದರು. ಆದರೆ ಆರು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ  ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಕೆಲವರು ಬಿಜೆಪಿ ಸೇರಿದ್ದಾರೆ. ಹೀಗೆ ಬಿಜೆಪಿ ಸೇರಿರುವ ಬಲವಂತ ಸಿಂಹ ರಜಪೂತ್‌ ಅವರನ್ನು 4ನೇ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಇದು ಅಹ್ಮದ್‌ ಪಟೇಲ್‌ ಗೆಲುವಿಗೆ ತೊಡಕಾಗಿ  ಪರಿಣಮಿಸಿದ್ದು, ಸತತ ಬಾರಿ ಬಾರಿ ಗೆದ್ದು, ಐದನೇ ಅವಧಿಗೆ ಸ್ಪರ್ಧಿಸಿರುವ ಅಹ್ಮದ್ ಪಟೇಲ್ ಅವರಿಗೆ ಈ ಬಾರಿ ಚುನಾವಣೆ ಕಠಿಣವಾಗುವುದಂತೂ ಸ್ಪಷ್ಟ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com