ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗೆ "ಕೈ" ಪಣ

ಗುಜರಾತ್ ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹ್ಮದಾಬಾದ್: ಗುಜರಾತ್ ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ.

ಏತನ್ಮಧ್ಯೆ ರಾಜ್ಯಸಭೆ ಚುನಾವಣೆ ಆರಂಭವಾಗಿರುವಂತೆಯೇ ಇತ್ತ ಗೆಲುವಿನ ಲೆಕ್ಕಾಚಾರಗಳು ಕೂಡ ಆರಂಭವಾಗಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಕುದುರೆಗಳಾಗಿದ್ದಾರೆ. ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿ ಒಟ್ಟು 121 ಶಾಸಕರನ್ನು ಹೊಂದಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ಹಾಗೂ ಕೇಂದ್ರ ಸಚಿವೆ ಸ್ಮೃತಿ ಅವರ ಗೆಲುವಿಗೆ ತಲಾ 45ರಂತೆ ಒಟ್ಟು 90 ಮತಗಳು ಬೇಕು. ಅದಾದ ಬಳಿಕ ಬಿಜೆಪಿಯಲ್ಲಿ 31 ಮತಗಳು ಉಳಿಯುತ್ತವೆ. ಈ 31 ಮತಗಳು ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಬಲವಂತಸಿಂಹ ರಜಪೂತ್‌ ಅವರಿಗೆ ದೊರೆಯಲಿವೆ.

ಬಲವಂತಸಿಂಹ ರಜಪೂತ್‌ ಗೆಲುವಿಗೆ ಇನ್ನೂ 16 ಮತಗಳು ಕೊರತೆ ಬರಲಿದ್ದು, ಪ್ರಸ್ತುತ ಕಾಂಗ್ರೆಸ್‌ ಜತೆಗೆ ಮುನಿಸಿಕೊಂಡಿರುವ ಏಳು ಶಾಸಕರ ಮತಗಳು ರಜಪೂತ್‌ ಅವರಿಗೆ ಸಿಕ್ಕರೆ ಅವರು ಗೆಲುವಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಆದರೂ ಬಲವಂತಸಿಂಹ ರಜಪೂತ್‌ ಅವರ ಗೆಲುವಿಗೆ ಇನ್ನೂ 6 ಮತಗಳ ಕೊರತೆಯುಂಟಾಗಲಿದೆ.  ಇದೇ ಕಾರಣಕ್ಕೆ ಕಾಂಗ್ರೆಸ್ ನ ಅಹ್ಮದ್ ಪಟೇಲ್ ಅವರು ತಮಗೆ ನಿರಾಯಾಸ ಗೆಲುವು ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ತನ್ನ ಶಾಸಕರನ್ನು ಬಿಜೆಪಿ ಕದಿಯುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌, ತನ್ನ ಎಲ್ಲ 44 ಶಾಸಕರನ್ನು ಒಂದು ವಾರ ಕರ್ನಾಟಕದಲ್ಲಿ ರೆಸಾರ್ಟ್‌ ನಲ್ಲಿ ಇರಿಸಿ ರಕ್ಷಿಸುವ ಕೆಲಸ ಮಾಡಿತ್ತು. ಈ ಶಾಸಕರು ಸೋಮವಾರ  ಗುಜರಾತ್‌ ತಲುಪಿ, ಆನಂದ್‌ ನ ರೆಸಾರ್ಟ್‌ ಒಂದರಲ್ಲಿ ತಂಗಿದ್ದಾರೆ. ಮಂಗಳವಾರ ಅವರು ನೇರವಾಗಿ ರೆಸಾರ್ಟ್ ನಿಂದ ವಿಧಾನಸಭೆಗೆ ಹೋಗಿ ಮತ ಚಲಾಯಿಸಲಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಆಪರೇಷನ್ ಕಮಲದ  ಶಂಕೆ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ ಎಂದು ಹೇಳಲಾಗಿದೆ.

ಅಹ್ಮದ್‌ ಪಟೇಲ್‌ ಅವರ ಗೆಲುವಿಗೆ 45 ಮತಗಳ ಅಗತ್ಯ ಇದೆ. ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರ ಸಂಖ್ಯೆ 44 ಮಾತ್ರ. ಈ ಎಲ್ಲರೂ ಪಟೇಲ್‌ ಅವರಿಗೆ ಮತ ಹಾಕಿದರೂ ಗೆಲುವಿಗೆ ಇನ್ನೂ ಒಂದು ಮತ ಬೇಕು. ಎನ್‌ಸಿಪಿಯ  ಇಬ್ಬರು ಮತ್ತು ಜೆಡಿಯು ಹಾಗೂ ಗುಜರಾತ್‌ ಪರಿವರ್ತನ್‌ ಪಾರ್ಟಿಯ ತಲಾ ಒಬ್ಬ ಶಾಸಕರ ಬೆಂಬಲ ದೊರೆಯಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ಗೆ ಇದೆ. ಬಂಡಾಯ ಎದ್ದಿರುವ 7 ಶಾಸಕರ ಮನವೊಲಿಕೆ ಕೆಲಸವನ್ನು ಕಾಂಗ್ರೆಸ್‌  ಮಾಡುತ್ತಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com