
ಚಂಡೀಘಡ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ 10 ವರ್ಷದ ಚಂಡೀಘಡ ಮೂಲದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದ್ದು, ಮಗು ಹಾಗೂ ಬಾಲಕಿ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹಿಂದೆ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ ಗರ್ಭಪಾತಕ್ಕಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಳು. ಬಾಲಕಿಗೆ 32 ವಾರಗಳಾದ್ದರಿಂದ ಈ ಹಂತದಲ್ಲಿ ಗರ್ಭಪಾತ ಮಾಡುವುದು ಅಪಾಯಕಾರಿ ಎಂಬ ವೈದ್ಯರ ವರದಿಯ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿತ್ತು. ಇದೀಗ ಅದೇ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸಂತ್ರಸ್ಥ ಬಾಲಕಿಯನ್ನು ಚಂಡೀಗಡದ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯ ನುರಿತ ತಜ್ಞರ ತಂಡ ಬಾಲಕಿಯ ಮೇಲ್ವಿಚಾರಣೆ ನಡೆಸಿದ್ದರು ಮತ್ತು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯಲಾಗಿದೆ. ಮಗು 2.05 ಕೆಜಿ ತೂಕವಿದ್ದು, ಪ್ರಸ್ತುತ ಮಗು ಹಾಗೂ ಬಾಲಕಿ ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಾಲಕಿಯನ್ನು ಪ್ರತ್ಯೇಕ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಮಗು ಹೆತ್ತ ವಿಚಾರವೇ ಬಾಲಕಿಗೆ ತಿಳಿದಿಲ್ಲ
ಇನ್ನು ಪ್ರಪಂಚವನ್ನೇ ಅರಿಯದ 10 ವರ್ಷದ ಆಪ್ರಾಪ್ತೆಗೆ ತಾನು ಮಗುವಿಗೆ ಜನ್ಮ ನೀಡಿದ್ದೇನೆ ಎಂಬ ವಿಚಾರವೇ ತಿಳಿದಿಲ್ಲವಂತೆ. ಆಕೆಯ ಪೋಷಕರು ಆಕೆಯ ಹೊಟ್ಟೆಯಲ್ಲಿ ಕಲ್ಲಿದೆ ಎಂದು ಸುಳ್ಳು ಹೇಳಿ ಆಸ್ರತ್ರೆಗೆ ದಾಖಲು ಮಾಡಿದ್ದರಂತೆ. ಇದೀಗ ಆಕೆ ಮಗುವಿಗೆ ಜನ್ಮ ನೀಡಿದ್ದು, ಬಾಲಕಿಯ ಮಗುವನ್ನು ಯಾರಾದರೂ ದಾನಿಗಳಿಗೆ ದತ್ತು ನೀಡುವಂತೆ ಬಾಲಕಿ ಪೋಷಕರು ಆಸ್ಪತ್ರೆ ಸಿಬ್ಹಂದಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಬಾಲಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸ್ಥಳೀಯ ಜಿಲ್ಲಾಡಳಿತವೇ ಕೋರ್ಟ್ ನ ಆದೇಶದಂತೆ ವಹಿಸಿಕೊಂಡಿದೆ.
ಏನಿದು ಪ್ರಕರಣ?
ತನ್ನ ಸ್ವಂತ ಮಾವನಿಂದಲೇ ಚಂಢೀಘಡ ಮೂಲದ 10 ವರ್ಷದ ಬಾಲಕಿ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದಳು. ಇದರ ಅರಿವೇ ಇಲ್ಲದ ಪೋಷಕರು ಬಾಲಕಿ ಒಮ್ಮೆ ಹೊಟ್ಟೆ ನೋವು ಎಂದಾಗ ವೈದ್ಯರ ಬಳಿ ಪರೀಕ್ಷಿಸಿದ್ದಾರೆ. ಈ ವೇಳೆ ಬಾಲಕಿ ಗರ್ಭವತಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಜುಲೈ 28ರಂದು ಸುಪ್ರೀಂ ಕೋರ್ಟ್ ನಲ್ಲಿ ವಕೀಲರೊಬ್ಬರು ಅತ್ಯಾಚಾರಕ್ಕೊಳಗಾದ ಬಾಲಕಿಗೆ ಗರ್ಭಪಾತ ಮಾಡಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ಸ್ವೀಕರಿಸಿದ್ದ ನ್ಯಾಯಾಲಯ ಬಾಲಕಿಯ ಪರೀಕ್ಷೆಗೆ ವೈದ್ಯರಿಗೆ ಸೂಚಿಸಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರ ತಂಡ ಆಕೆ 30 ವಾರಗಳ ಗರ್ಭಿಣಿಯಾಗಿದ್ದು, ಈ ಹಂತದಲ್ಲಿ ಗರ್ಭಪಾತ ಮಾಡುವುದು ಬಾಲಕಿಗೆ ಹಾಗೂ ಆಕೆಯ ಗರ್ಭದಲ್ಲಿರುವ ಮಗುವಿಗೆ ತೀರಾ ಅಪಾಯಕಾರಿ. ಗರ್ಭಪಾಕ್ಕೆ ಗರಿಷ್ಠ 20 ವಾರಗಳಷ್ಚೇ ಅವಕಾಶ ವಿರುತ್ತದೆ ಎಂದು ವರದಿ ನೀಡಿದ್ದರು.
ವೈದ್ಯರ ವರದಿಯನ್ವಯ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆಎಸ್ ಖೆಹರ್ ಹಾಗೂ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿ ಅರ್ಜಿ ವಜಾಗೊಳಿಸಿತ್ತು. ಅಲ್ಲದೆ ಸಂತ್ರಸ್ತೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸುವಂತೆ ಆದೇಶ ನೀಡಿದ್ದರು.
Advertisement