

ನವದೆಹಲಿ: ವಿಶ್ವದಲ್ಲೇ ಅತ್ಯಂತ ಸುಧಾರಿತ ಯುದ್ಧ ಹೆಲಿಕಾಪ್ಟರ್ ಗಳಲ್ಲಿ ಅಮೆರಿಕದ ಬೋಯಿಂಗ್ ಸಂಸ್ಥೆ ತಯಾರು ಮಾಡುತ್ತಿರುವ ಅಪಾಚೆ ಹೆಲಿಕಾಪ್ಟರ್ ಕೂಡ ಒಂದಾಗಿದ್ದು, ಇಂತಹ ಆರು ಹೆಲಿಕಾಪ್ಟರ್ ಗಳನ್ನು ಭಾರತ ಖರೀದಿಸಲು ಮುಂದಾಗಿದೆ.
ಬೋಯಿಂಗ್ ಸಂಸ್ಥೆ ಭಾರತೀಯ ಸೇನೆಗೆ ನೀಡುತ್ತಿರುವ ಅಪಾಚೆ ಹೆಲಿಕಾಪ್ಟರ್ ವಿಶೇಷತೆ ಗಳು ಇಲ್ಲಿವೆ.
ಅಪಾಚೆ ಹೆಲಿಕಾಪ್ಟರ್ ಗಳು ಬಹುಉದ್ದೇಶಿತ ಯುದ್ಧ ಹೆಲಿಕಾಪ್ಟರ್ ಗಳಾಗಿದ್ದು, ಯಾವುದೇ ರೀತಿಯ ಹವಾಮಾನದಲ್ಲೂ ನಿರಂತರವಾಗಿ ಕಾರ್ಯಾಚರಿಸುವ ಸಮಾರ್ಥ್ಯ ಹೊಂದಿದೆ. ಇತರೆ ದಾಳಿ ಹೆಲಿಕಾಪ್ಟರ್ ಗಳಿಗೆ ಹೋಲಿಕೆ ಮಾಡಿದರೆ ಬೋಯಿಂಗ್ ಸಂಸ್ಥೆ ತಯಾರಿಸುವ ಈ ಆಪಾಚೆ ಹೆಲಿಕಾಪ್ಟರ್ ನೈಟ್ ಮೋಡ್ ವ್ಯವಸ್ಥೆ ಹೊಂದಿದ್ದು, ರಾತ್ರಿ ವೇಳೆಯಲ್ಲೂ ಕಾರ್ಯಾಚರಣೆ ನಡೆಸಿ ನೆಲದಲ್ಲಿನ ಶತ್ರುಗಳನ್ನು ಗುರುತಿಸಿ ನಾಶ ಮಾಡುತ್ತದೆ.
ಈ ಅಪಾಚೆ ಹೆಲಿಕಾಪ್ಟರ್ ಗಳನ್ನು ಪ್ರಮುಖವಾಗಿ ಭೂಸೇನಾ ಕಾರ್ಯಚರಣೆಗಳಿಗಾಗಿ ನಿರ್ಮಾಣ ಮಾಡಲಾಗಿದ್ದು, ದಾಳಿ ವೇಳೆ ಈ ಕಾಪ್ಟರ್ ಎಷ್ಟು ಪರಿಣಾಮಕಾರಿ ಮತ್ತು ವಿಧ್ವಂಸಕವಾಗಿರುತ್ತದೆ ಎಂದರೆ ಕೇವಲ 60 ಸೆಕೆಂಡ್ ಗಳಲ್ಲಿ ಏಕಕಾಲಕ್ಕೆ 128 ಗುರಿಗಳನ್ನು ಛಿದ್ರ ಮಾಡಲ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್ ಗಳಿಗೆ ಅಳವಡಿಸಿರುವ ಅತ್ಯಾಧುನಿಕ ಕ್ಷಿಪಣಿಗಳು ಬಲಾಢ್ಯ ಟ್ಯಾಂಕರ್ ಗಳನ್ನೂ ಕೂಡ ಛಿದ್ರ ಮಾಡುವ ಸಾಮರ್ಥ್ಯ ಹೊಂದಿದೆ.
ಪ್ರಸ್ತುತ ಭಾರತ ಖರೀದಿ ಮಾಡಿರುವ ಅಪಾಚೆ 64 ಎ ಹೆಲಿಕಾಪ್ಟರ್ ಗಳು ನಾಲ್ಕು ಬ್ಲೇಡ್ (ಕಾಪ್ಟರ್ ನ ರೆಕ್ಕೆಗಳು)ನ ಟ್ವಿನ್ ಟರ್ಬೋ ಶಾಫ್ಟ್ (ಹೆಲಿಕಾಪ್ಟರ್ ನ ಎಂಜಿನ್) ಎಂಜಿನ್ ಹೊಂದಿದ್ದು. ಈ ಬಲಿಷ್ಟ ಎಂಜಿನ್ ಗಳು ಕ್ಷಣ ಮಾತ್ರದಲ್ಲಿ ಕಾಪ್ಟರ್ ಟೇಕ್ ಆಫ್ ಆಗಲು ನೆರವಾಗುತ್ತದೆ. ಕಾಪ್ಟರ್ ನೆಲಮಟ್ಟದಲ್ಲಿದ್ದಾಗ ಶುತ್ರುಗಳು ದಾಳಿ ನಡೆಸಿದರೆ ಕೂಡಲೇ ಆಗಸಕ್ಕೆ ಹಾರಿ ಶುತ್ರುಗಳ ಮೇಲೆ ದಾಳಿ ಮಾಡುವ ಸಮಾರ್ಥ್ಯ ಹೊಂದಿದೆ. ಕಾಪ್ಟರ್ ನಲ್ಲಿ ಅಳವಡಿಸಿರುವ ಬಲಿಷ್ಠ ರಾಡಾರ್ ವ್ಯವಸ್ಥೆ ನಿಯಂತ್ರಣ ಕೇಂದ್ರದಿಂದ ನಿಗದಿತವಾಗಿ ತಡೆ ರಹಿತ ಸಂದೇಶಗಳನ್ನು ರವಾನಿಸುವ ಮತ್ತು ಪಡೆಯುವ ವ್ಯವಸ್ಥೆ ಹೊಂದಿದೆ.
ಅಂತೆಯೇ ಕಾಪ್ಟರ್ ನಲ್ಲಿ ನೋಸ್ ಮೌಂಟೆಡ್ ಸ್ಯೂಟ್ ಅಳವಡಿಸಲಾಗಿದ್ದು, ಇದು ಕಾಪ್ಟರ್ ಆಗಸದಲ್ಲಿದ್ದ ವೇಳೆ ಭೂಮಿಯ ಮೇಲಿನ ಶುತ್ರುಗಳ ಚಲನವಲನಗಳ ಮೇಲೆ ಕಣ್ಣಿಟ್ಟು ಪೈಲಟ್ ಗೆ ಮಾಹಿತಿ ನೀಡುತ್ತದೆ. ಇದರಿಂದ ಪೈಲಟ್ ಶುತ್ರುಗಳ ಮೇಲೆ ದಾಳಿ ಮಾಡಲು ನೆರವಾಗುತ್ತದೆ. ಇನ್ನು ಕಾಪ್ಟರ್ ನಲ್ಲಿ ರಾಡಾರ್ ನೊಂದಿಗೆ ಲೇಸರ್, ಇನ್ ಫ್ರೇರ್ಡ್ ವ್ಯವಸ್ಥೆ ಇದ್ದು, ಇದು ಹೆಲಿಕಾಪ್ಟರ್ ಎಲ್ಲಿದೆ ಮತ್ತು ಯಾವ ಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತಿರುತ್ತದೆ. ಅಂತೆಯೇ ನಿಯಂತ್ರಣ ಕೇಂದ್ರಕ್ಕೆ ಶುತ್ರುಗಳ ಮಾಹಿತಿಯನ್ನೂ ಕೂಡ ನೀಡುತ್ತಿರುತ್ತದೆ.
ಅಪಾಚೆ ಹೆಲಿಕಾಪ್ಟರ್ ಗೆ ಲೇಸರ್-ನಿರ್ದೇಶಿತ ನಿಖರವಾದ ಹೆಲ್ಫೈರ್ ಕ್ಷಿಪಣಿಗಳನ್ನು ಅಳವಡಿಸಲಾಗಿದ್ದು, ಇದು ಶುತ್ರಗಳ ಅಡಗುದಾಣಗಳನ್ನು, ಟ್ಯಾಂಕರ್ ಗಳನ್ನು, ಯುದ್ಧ ವಿಮಾನಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರಳಿಸುತ್ತದೆ. ಅಂತೆಯೇ ಕಾಪ್ಟರ್ ಗೆ 70 ಎಂಎಂ ರಾಕೆಟ್ ಗಳನ್ನು, 30 ಎಂಎಂ ಆಟೋಮ್ಯಾಟಿಕ್ ಕ್ಯಾನನ್ ಗನ್ ಅಳವಡಿಸಲಾಗಿದ್ದು, ನೂರಾರು ಶತ್ರುಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ 1200 ಸ್ಫೋಟಕ ಮತ್ತು ಬಹು ಉದ್ದೇಶದ ಬುಲೆಟ್ ಗಳನ್ನು ಗನ್ ಗೆ ಅಳವಡಿಸಲಾಗಿರುತ್ತದೆ.
ಅಪಾಚೆ ಹೆಲಿಕಾಪ್ಟರ್ ಗಂಟೆಗೆ 284 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಕಾಪ್ಟರ್ ನಲ್ಲಿ ಆಗಸದಲ್ಲೇ ವಿಮಾನಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳನ್ನು ಅಳವಡಿಸಲಾಗಿರುತ್ತದೆ. ಅಂತೆಯೇ ಅಪಾಚೆ ಹೆಲಿಕಾಪ್ಟರ್ ಗಳಲ್ಲಿ ಚಾಲಕ ರಹಿತ ಯುದ್ಧ ವಿಮಾನಗಳನ್ನು ನಿಯಂತ್ರಿಸುವ ವ್ಯವಸ್ಥೆ ಅಳವಡಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಬಳಕೆಗೆ ಬರುವಂತೆ ಕಾಪ್ಟರ್ ನಲ್ಲಿ ರಿಸರ್ವ್ಡ್ ಇಂಧನ ವ್ಯವಸ್ಥೆ ಮಾಡಲಾಗಿರುತ್ತದೆ.
ಇದೇ ಕಾರಣಕ್ಕೆ ಜಪಾನ್, ಗ್ರೀಸ್, ಇಸ್ರೇಲ್, ನೆದರ್ಲೆಂಡ್, ಸಿಂಗಾಪುರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ಈ ಯುದ್ಧ ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡುತ್ತಿದ್ದು, ಭಾರತ ಕೂಡ ಇದೀಗ ಈ ಅತ್ಯಾಧುನಿಕ ಹೆಲಿಕಾಪ್ಟರ್ ಅನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ಮುಂದಾಗಿದೆ. ಮೂಲಗಳ ಪ್ರಕಾರ ಭಾರತ 22 ಅಪಾಚೆ ಹೆಲಿಕಾಪ್ಟರ್ ಗಳನ್ನು ಹೊಂದಲು ನಿರ್ಧರಿಸಿದ್ದು, ಇದರ ಆರಂಭಿಕ ಹಂತವಾಗಿ 6 ಕಾಪ್ಟರ್ ಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ.
Advertisement