ಗೋರಖ್ ಪುರ ಆಸ್ಪತ್ರೆ ದುರಂತಕ್ಕೆ ಈ ಹಿಂದಿದ್ದ ಸರ್ಕಾರಗಳೇ ಕಾರಣ: ಸಿಎಂ ಯೋಗಿ ಅದಿತ್ಯನಾಥ್

ಗೋರಖ್'ಪುರ ಆಸ್ಪತ್ರೆ ದುರಂತಕ್ಕೆ ಈ ಹಿಂದಿದ್ದ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರ ಸರ್ಕಾರವೇ ಕಾರಣ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಹೇಳಿದ್ದಾರೆ...
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ನವದೆಹಲಿ: ಗೋರಖ್'ಪುರ ಆಸ್ಪತ್ರೆ ದುರಂತಕ್ಕೆ ಈ ಹಿಂದಿದ್ದ ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರ ಸರ್ಕಾರವೇ ಕಾರಣ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಹೇಳಿದ್ದಾರೆ.

ಸ್ವಚ್ಛ ಉತ್ತರಪ್ರದೇಶ, ಸ್ವಸ್ಥ ಉತ್ತರಪ್ರದೇಶ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಗೋರಖ್'ಪುರದ ಬಿಆರ್'ಡಿ ಆಸ್ಪತ್ರೆಯಲ್ಲಿ 70 ಮಕ್ಕಳ ಸಾವಿಗೆ ಈ ಹಿಂದೆ ಅಧಿಕಾರ ನಡೆಸಿದ್ದ ಸರ್ಕಾರಗಳೇ ಕಾರಣ. ಕಳೆದ 12-15 ವರ್ಷಗಳ ಕಾಲ ತಮ್ಮ ಸ್ವಾರ್ಥತೆಗೆ ಸಂಸ್ಥೆಗಳನ್ನು ಸ್ಥಾಪಿಸಿ ಭ್ರಷ್ಟಾಚಾರ ನಡೆಸುತ್ತಿದ್ದ ಸರ್ಕಾರಗಳಿಂದಾಗಿ ಜನರು ತಮಗೆ ಸಿಗಬೇಕಿದ್ದ ಸೌಲಭ್ಯಗಳನ್ನು ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. 

ಮಿದುಳು ಜ್ವರದ ವಿರುದ್ದ ನಾನು ಹೋರಾಟವನ್ನು ಆರಂಭಿಸಿದ್ದೆ. ಅನಾರೋಗ್ಯಕರ ವಾತಾವರಣ ಹಾಗೂ ಮಾಲಿನ್ಯವೇ ರೋಗಕ್ಕೆ ಪ್ರಮುಖ ಕಾರಣವಾಗಿದೆ. ಗುಣಮುಖರಾಗುವುದಕ್ಕಿಂತಲೂ ರೋಗವನ್ನು ತಡೆಗಟ್ಟುವುದು ಉತ್ತಮವಾಗುತ್ತದೆ. ನೈರ್ಮಲ್ಯ ತಡೆಗಟ್ಟುವ ಮೂಲಕವೇ ಇದರ ಆರಂಭವಾಗಬೇಕಿದೆ. ಕಲುಷಿತ ನೀರು ಕೂಡ ರೋಗಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಕಿಡಿಕಾರಿರುವ ಅವರು, ಗೋರಖ್ ಪುರ ವಿಹಾರ ತಾಣ (ಪ್ರವಾಸಿತಾಣ)ವಾಗಿ ಬದಲಾಗಲು ನಾನು ಬಿಡುವುದಿಲ್ಲ. ದೆಹಲಿ ಕುಳಿತುಕೊಂಡಿರುವ ಯುವರಾಜನಿಗೆ ಸ್ವಚ್ಛ ಅಭಿಯಾನ ಅರ್ಥವಾಗುವುದಿಲ್ಲ. ಅಂತಹ ಜನರಿಗೆ ಗೋರಖ್ ಪುರ ಪ್ರವಾಸಿ ತಾಣವಾಗಿರುತ್ತದೆ. ಅಂತಹ ಜನರಿಗೆ ಗೋರಖ್ ಪುರ ಪ್ರವಾಸಿ ತಾಣವಾಗಲು ನಾನು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com