20 ನಿಮಿಷದಲ್ಲಿ ದುರಸ್ತಿ ಕಾರ್ಯ ನಡೆಸಿದ್ದರೆ, ದುರಂತ ತಪ್ಪಿಸಬಹುದಿತ್ತು: ಪ್ರಾಥಮಿಕ ವರದಿ

20 ನಿಮಿಷದಲ್ಲಿ ಹಳಿ ದುರಸ್ತಿ ಕಾರ್ಯ ನಡೆಸಿದ್ದರೆ 23 ಮಂದಿಯ ಸಾವಿಗೆ ಕಾರಣವಾದ ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತವನ್ನು ತಪ್ಪಿಸಬಹುದಿತ್ತು ಎಂದು ಪ್ರಾಥಮಿಕ ವರದಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಜಾಫರ ನಗರ: 20 ನಿಮಿಷದಲ್ಲಿ ಹಳಿ ದುರಸ್ತಿ ಕಾರ್ಯ ನಡೆಸಿದ್ದರೆ 23 ಮಂದಿಯ ಸಾವಿಗೆ ಕಾರಣವಾದ ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತವನ್ನು ತಪ್ಪಿಸಬಹುದಿತ್ತು ಎಂದು ಪ್ರಾಥಮಿಕ ವರದಿ ಹೇಳಿದೆ.

ಶನಿವಾರ ಸಂಜೆ ಸಂಭವಿಸಿದ್ದ ಕಳಿಂಗ-ಉತ್ಕಲ್ ಎಕ್ಸ್ ಪ್ರೆಸ್ ರೈಲು ದುರಂತ ಸಂಬಂಧ ಇಂದು ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಲಾಗಿದ್ದು, ವರದಿಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ದುರಂತ  ಸಂಭವಿಸಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ. ಕಳಿಂಗ-ಉತ್ಕಲ್ ರೈಲು ಸಂಚರಿಸಬೇಕಿದ್ದ ಹಳಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕುರಿತು ರೈಲು ಚಾಲಕನಿಗೆ ಮಾಹಿತಿಯೇ ಇರಲಿಲ್ಲವಂತೆ. ಈ ಬಗ್ಗೆ ಚಾಲಕನಿಗೆ ನಿಯಂತ್ರಣ  ಕೊಠಡಿಯಿಂದ ಯಾವೊಬ್ಬ ಸಿಬ್ಬಂದಿಯಾಗಲಿ ಅಥವಾ ಅಧಿಕಾರಿಗಳಾಗಲಿ ಮಾಹಿತಿ ನೀಡಿರಲಿಲ್ಲ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಆರೋಪಿಸಲಾಗಿದೆ.

ಉತ್ಕಲ್ ಎಕ್ಸ್ ಪ್ರೆಸ್ ರೈಲು ಬರುತ್ತಿದ್ದಾಗ 15 ಮೀಟರ್ ಉದ್ದದ ಹಳಿಯನ್ನು ತೆಗೆದು ಬೇರೆಯದನ್ನು ಜೋಡಿಸಲಾಗುತ್ತಿತ್ತು. ಅಷ್ಟರಲ್ಲಾಗಲೇ ರೈಲು ಆಗಮಿಸಿ ಬಿಟ್ಟಿತ್ತು. ಹೀಗಾಗಿ ಬೇರೆ ಯಾವುದೇ ಆಯ್ಕೆಗಳಿಲ್ಲದೆ ಪ್ರಾಣ ಉಳಿಸುವ  ಸಲುವಾಗಿ ಕಾರ್ಮಿಕರು ಅಲ್ಲಿಂದ ಓಡಿದ್ದರು. ರೈಲಿನಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷ ಇರಲಿಲ್ಲ. 20 ನಿಮಿಷದಲ್ಲಿ ಹಳಿ ದುರಸ್ತಿಕಾರ್ಯ ಪೂರ್ಣಗೊಳಿಸಿದ್ದರೆ ದುರಂತ ತಪ್ಪಿಸಬಹುದಿತ್ತು ಎಂದು ರೈಲ್ವೆ ಅಧಿಕಾರಿಗಳು  ಹೇಳಿದ್ದಾರೆ.

ಇನ್ನು ಈ ಮಾರ್ಗದಲ್ಲಿ ದುರಸ್ತಿಕಾರ್ಯ ನಡೆಯುತ್ತಿದೆ ಎನ್ನುವ ಮಾಹಿತಿ ಖಟೌಲಿ ಸ್ಟೇಷನ್ ನ ಸಿಬ್ಬಂದಿಗೂ ತಿಳಿದಿರಲಿಲ್ಲ ಎನ್ನಲಾಗಿದೆ. ಒಂದು ವೇಳೆ ಅಪಾಯದ ಸೂಚನೆ ಸಿಕ್ಕಿದ್ದರೆ ಖಟೌಲಿ ಸ್ಟೇಷನ್ ಗೆ ಉತ್ಕಲ್ ಎಕ್ಸ್ ಪ್ರೆಸ್  ತಲುಪುತ್ತಿರಲಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಂಕೆ ಮೂಡಿಸಿದ ದುರಸ್ತಿ ಕಾರ್ಯ
ಇನ್ನು ಮೀರತ್ ಹಾಗೂ ಮುಜಾಫರ್ ನಗರದ ನಡುವಿನ ಮಾರ್ಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದರೂ, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲವೇ.. ಅಥವಾ ಮಾಹಿತಿ ಇದ್ದರೂ ನಿರ್ಲಕ್ಷ್ಯವಹಿಸಿದ್ದರೆ ಅಥವಾ ಸಿಬ್ಬಂದಿಗಳೇ  ಅಧಿಕಾರಿಗಳಿಗೆ ಮಾಹಿತಿ ನೀಡದೇ ದುರಸ್ತಿ ಕಾರ್ಯ ನಡೆಸುತ್ತಿದ್ದರೇ ಎಂಬ ಹಲವು ಪ್ರಶ್ನೆಗಳು ಎದ್ದಿದ್ದು, ಈ ಬಗ್ಗೆ ಕೂಲಂಕುಷ ತನಿಖೆಯಿಂದ ಮಾತ್ರ ಉತ್ತರ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com