ತ್ರಿವಳಿ ತಲಾಖ್‌ ಕುರಿತು "ಸುಪ್ರೀಂ" ತೀರ್ಪು: ಇಂದು ಮಹತ್ವದ ದಿನ ಎಂದ ಮುಕುಲ್ ರೋಹ್ಟಗಿ

ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರವು ತ್ರಿವಳಿ ತಲಾಖ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಇಂದು ತನ್ನ ಮಹತ್ವದ ತೀರ್ಪು ನೀಡಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರವು ತ್ರಿವಳಿ ತಲಾಖ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಇಂದು ತನ್ನ ಮಹತ್ವದ ತೀರ್ಪು ನೀಡಲಿದೆ.

ತ್ರಿವಳಿ ತಲಾಖ್‌ ನ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮಂಗಳವಾರ ತೀರ್ಪು ಪ್ರಕಟಿಸಲಿದ್ದು, ತ್ರಿವಳಿ ತಲಾಖ್‌ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿ ಮುಸ್ಲಿಂ ಮಹಿಳೆಯರ  ಗುಂಪು ದೂರು ಸಲ್ಲಿಸಿತ್ತು. ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತ್ರಿವಳಿ ತಲಾಖ್‌ ಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು  ಒಟ್ಟುಗೂಡಿಸಿ ಸತತ ಆರು ದಿನ ವಿಚಾರಣೆ ನಡೆಸಿತ್ತು. ಅಂತೆಯೇ ಕಳೆದ ಮೇ 18ರಂದು ತನ್ನ ವಿಚಾರಣೆ ಪೂರ್ಣಗೊಳಿಸಿ ಇಂದಿಗೆ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಇನ್ನು ಈ ಹಿಂದೆ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಲು ಕಾನೂನು ಯಾಕೆ ರೂಪಿಸಿಲ್ಲ ಎಂದು ಸಂವಿಧಾನ ಪೀಠವು ವಿಚಾರಣೆ ಸಂದರ್ಭದಲ್ಲಿ ಸರ್ಕಾರವನ್ನು ಪ್ರಶ್ನಿಸಿತ್ತು. ತ್ರಿವಳಿ ತಲಾಖ್‌ ವಿಚಾರದಲ್ಲಿ ನ್ಯಾಯಾಲಯದ  ಮಧ್ಯಪ್ರವೇಶವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ವಿರೋಧಿಸಿತ್ತು. ಆದರೆ, ತ್ರಿವಳಿ ತಲಾಖ್‌ ಪದ್ಧತಿಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ತ್ರಿವಳಿ ತಲಾಖ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಹಿಳೆಯರ ಗುಂಪನ್ನು ಕೇಂದ್ರ ಸರ್ಕಾರವು ಬೆಂಬಲಿಸಿತ್ತು. ಈ ವಿಚಾರವನ್ನು ಲಿಂಗ ಸಮಾನತೆ, ಸಾಂವಿಧಾನಿಕ ನೈತಿಕತೆ ಮತ್ತು ಆತ್ಮಸಾಕ್ಷಿಯ ದೃಷ್ಟಿಯಿಂದ ಪರಿಶೀಲನೆಗೆ  ಒಳಪಡಿಸಬೇಕು ಎಂದು ಒತ್ತಾಯಿಸಿತ್ತು. ತ್ರಿವಳಿ ತಲಾಖ್‌ ಎಂಬುದು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಣ ಸಂಘರ್ಷ ಅಲ್ಲ. ಇದು ಮುಸ್ಲಿಂ ಸಮುದಾಯದೊಳಗಿನ ಗಂಡಸರು ಮತ್ತು ಹೆಂಗಸರ ನಡುವಣ  ಸಂಘರ್ಷ ಎಂದು ಸರ್ಕಾರ ವಾದಿಸಿತ್ತು. ತ್ರಿವಳಿ ತಲಾಖ್‌ ಪದ್ಧತಿಯು ಇಸ್ಲಾಂ ಧರ್ಮದ ಮೂಲಭೂತ ಅಂಶ ಅಲ್ಲ ಎಂದೂ ಸರ್ಕಾರ ಪ್ರತಿಪಾದಿಸಿತ್ತು.

ಇನ್ನು ಈ ಮಹತ್ವದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ನಿಜಕ್ಕೂ ಇದೊಂದು ವಿಶೇಷ ದಿನವಾಗಿದೆ. ತ್ರಿವಳಿ  ತಲಾಖ್ ಸಂಬಂಧ ಸಂವಿಧಾನ ಪೀಠ ಯಾವ ತೀರ್ಪು ನೀಡುತ್ತದೆ ಎಂದು ತಿಳಿಯಲು ನಾನು ಕೂಡ ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಪ್ರಕರಣ ಸಂಬಂಧ ಪ್ರಕಿಕ್ರಿಯೆ ನೀಡಿರುವು ಸಂತ್ರಸ್ಥೆ ಸಾಯಿರಾ ಬಾನು ಅವರು, ತೀರ್ಪು ನಮ್ಮ ಪರವಾಗಿರುತ್ತದೆ ಎಂಬ ವಿಶ್ವಾಸವಿದೆ, ಸುಪ್ರೀಂ ಕೋರ್ಟ್ ನಮ್ಮ ನೋವನ್ನು ಪರಿಗಣಿಸಲಿದೆ. ಸಮಯ ಬದಲಾಗಿದ್ದು,  ಕಾನೂನು ಕೂಡ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com