ದೇಶ
ತ್ರಿವಳಿ ತಲಾಖ್ ತೀರ್ಪು: ಮುಸ್ಲಿಂ ಮಹಿಳೆಯರಲ್ಲಿ ಗೆಲುವು ಸಾಧಿಸಿದ ಮತ್ತು ಸುರಕ್ಷಿತ ಭಾವನೆ!
ತ್ರಿವಳಿ ತಲಾಖ್ ರದ್ದು ಪಡಿಸಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಈ ತೀರ್ಪನ್ನು ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ...
ನವದೆಹಲಿ: ತ್ರಿವಳಿ ತಲಾಖ್ ರದ್ದು ಪಡಿಸಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಈ ತೀರ್ಪನ್ನು ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ.
ತ್ರಿವಳಿ ತಲಾಖ್ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಫಹ್ರಾ ಫೈಜ್, ಝಕಿಯ ಸುಮನ್, ನೂರ್ಜೇಹನ್ ನಿಯಾಜ್ ಮತ್ತು ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ(ಎಐಎಂಡಬ್ಲ್ಯೂಪಿಎಲ್ಬಿ) ಸುಪ್ರೀಂಕೋರ್ಟ್ ತೀರ್ಪು ಮುಸ್ಲಿಂ ಮಹಿಳೆಯರಲ್ಲಿ ಗೆಲುವು ಸಾಧಿಸಿದ ಮತ್ತು ಸುರಕ್ಷಿತ ಭಾವನೆ ಮೂಡಿಸಿದೆ. ಇದು ಮುಸ್ಲಿಂ ಮಹಿಳೆಯರಿಗೆ ದೊಡ್ಡ ವಿಜಯದ ಕ್ಷಣ. ದೊಡ್ಡ ಪರಿಹಾರ. ನಾವು ಅರ್ಧ ಯುದ್ಧ ಗೆದ್ದಿದ್ದೇವೆ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಹೇಳಿರುವ ಸುಪ್ರೀಂಕೋರ್ಟ್ ಈ ಪದ್ದತಿಯನ್ನು ರದ್ದುಗೊಳಿಸಿ ಪ್ರತ್ಯೇಕ ಕಾನೂನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಈ ಮೂಲಕ ನಾವು ಅರ್ಧ ಯುದ್ಧ ಜಯಿಸಿದ್ದು, ಪ್ರತ್ಯೇಕ ಕಾನೂನು ರಚನೆಗೊಂಡು ಈ ಅನಿಷ್ಠ ತ್ರಿವಳಿ ತಲಾಖ್ ಪದ್ದತಿಯನ್ನು ಅನುಸರಿಸುವವರಿಗೆ ತಕ್ಕ ಶಿಕ್ಷೆಯಾಗುವಂತಾದರೆ ಆಗ ನಾವು ಸಂಪೂರ್ಣ ಯುದ್ಧ ಗೆದ್ದಂತಾಗುತ್ತದೆ ಎಂದು ರಾಷ್ಟ್ರವಾದಿ ಮುಸ್ಲಿಂ ಮಹಿಳಾ ಸಂಘದ ಅಧ್ಯಕ್ಷೆ ಫಹ್ರಾ ಫೈಜ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಎಂಡಬ್ಲ್ಯೂಪಿಎಲ್ಬಿಯ ವಕೀಲ ಚಂದ್ರ ರಾಜನ್ ಅವರು, ಇಂದು ಅವಿಸ್ಮರಣೀಯ ದಿನ. ತ್ರಿವಳಿ ತಲಾಖ್ ಪದ್ದತಿಯನ್ನು ರದ್ದು ಪಡಿಸುವ ಮೂಲಕ ಮುಸ್ಲಿಂ ಮಹಿಳೆಯರನ್ನು ಸುಪ್ರೀಂಕೋರ್ಟ್ ರಕ್ಷಿಸಿದೆ. ಇನ್ನು ಆರು ತಿಂಗಳಲ್ಲಿ ಕಾನೂನು ಜಾರಿಗೆ ಬರಲಿದ್ದು ತುಂಬಾ ಸಂತೋಷವಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ