ಚೆನ್ನೈ: ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆಡಳಿತರೂಢ ಎಐಎಡಿಎಂಕೆಯ ಎರಡೆಲೆಯ ಎರಡು ಬಣಗಳು ವಿಲೀನವಾದ ಬೆನ್ನಲ್ಲೇ ಈಗ ಮತ್ತೊಂದು ಬಣ ಹುಟ್ಟಿಕೊಂಡಿದ್ದು, ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರನ್ನು ಬದಲಾಯಿಸಬೇಕು ಎಂದು ಗುರುವಾರ ಆಗ್ರಹಿಸಿದೆ.
ಸೋಮವಾರವಷ್ಟೇ ಮುಖ್ಯಮಂತ್ರಿ ಪಳನಿಸ್ವಾಮಿ ಬಣ ಹಾಗೂ ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೇಲ್ವಂ ಬಣ ವಿಲೀನವಾಗಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಬೆಂಬಲಿಗ ಶಾಸಕರು, ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ವಿಧಾನಸಭೆ ಸ್ಪೀಕರ್ ಪಿ ಧನಪಾಲ್ ಅವರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಿನಕರನ್ ಬೆಂಬಲಿಗ ಶಾಸಕ ಪಿ ವೆಟ್ರಿವೇಲ್ ಅವರು, ಸ್ಥಾಪಿತ ಸರ್ಕಾರದ ವಿರುದ್ಧ ನಾವು ಮತ ಹಾಕುತ್ತೇವೆ ಎಂದು ಹೇಳಿಲ್ಲ. ಆದರೆ ಮುಖ್ಯಮಂತ್ರಿ ಪಳನಿಸ್ವಾಮಿ ಬದಲಾಯಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದಿದ್ದಾರೆ.
ನಿನ್ನೆಯಷ್ಟೇ ಟಿಟಿವಿ ದಿನಕರನ್ ಅವರು ಇ.ಕೆ.ಪಳನಿಸ್ವಾಮಿ ಸಂಪುಟದ ನಾಲ್ವರು ಸಚಿವರನ್ನು ಪಕ್ಷದ ಹುದ್ದೆಗಳಿಂದ ವಜಾ ಮಾಡಿದ್ದಾರೆ. ಅಲ್ಲದೆ ತೆರವಾದ ಪಕ್ಷದ ಹುದ್ದೆಗಳಿಗೆ ತಮಗೆ ನಿಷ್ಠರಾದ ಶಾಸಕರನ್ನು ನೇಮಕ ಮಾಡಿದ್ದಾರೆ.
ಮತ್ತೊಂದು ಕಡೆ ಪುದುಚೇರಿಯ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಿರುವ ದಿನಕರನ್ ಬೆಂಬಲಿಗ 19 ಶಾಸಕರು ಮುಖ್ಯಮಂತ್ರಿ ಪಳನಿಸ್ವಾಮಿ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.