ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಫಿದಾಯನ್ ಉಗ್ರಗಾಮಿಗಳ ಜೊತೆ ನಡೆಯುತ್ತಿರುವ ಎನ್ ಕೌಂಟರ್ ನಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ಉಗ್ರರು ಅಡಗಿ ಕುಳಿತಿರುವ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ. ಅವರು ಇಂದು ಗೃಹ ಸಚಿವ ರಾಜನಾಥ್ ಸಿಂಗ್ ಜೊತೆ ಎನ್ ಕೌಂಟರ್ ಕುರಿತು ಚರ್ಚೆ ನಡೆಸಿದ್ದಾರೆ.
ಬಳಿಕ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ, ಎನ್ ಕೌಂಟರ್ ನಲ್ಲಿ ಒಬ್ಬ ಜಮ್ಮು-ಕಾಶ್ಮೀರ ಪೊಲೀಸ್ ಅಧಿಕಾರಿ, ಇಬ್ಬರು ಸಿಆರ್ ಪಿಎಫ್ ಜವಾನರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ಸಿಕ್ಕಿಹಾಕಿಕೊಂಡಿರುವ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿ ಬಗ್ಗೆ ವಿವರಿಸಿದ ಮೆಹ್ರಿಶಿ, ಅವರು ಸುರಕ್ಷಿತವಾಗಿದ್ದಾರೆಯೇ, ಇಲ್ಲವೇ ಎಂದು ಹೇಳುವುದು ಕಷ್ಟ. ಆದರೆ ಅವರ ಜೀವವಂತೂ ಅಪಾಯದಲ್ಲಿರುವುದು ನಿಶ್ಚಿತ ಎಂದರು.
ಉಗ್ರರು ಕಟ್ಟಡವೊಂದನ್ನು ಸುಟ್ಟುಹಾಕಿದ್ದಾರೆ. ಎನ್ ಕೌಂಟರ್ ನಲ್ಲಿರುವ ಉಗ್ರಗಾಮಿಗಳ ಸಂಖ್ಯೆ ನಿಖರವಾಗಿಲ್ಲದಿದ್ದರೂ ಇಬ್ಬರಿಂದ ನಾಲ್ವರಿದ್ದಾರೆ ಎಂದು ಹೇಳಿದರು.
ಗೃಹ ಸಚಿವರೊಂದಿಗೆ ಸಭೆಯಲ್ಲಿ ನಾಗರಿಕರ ಸುರಕ್ಷತೆ ಮತ್ತು ಗೃಹ ಸಚಿವಾಲಯದ ಮರುಸಂಘಟನೆಯಾಗಿತ್ತು ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಕೂಡ ಅಲ್ಲಿ ಎನ್ ಕೌಂಟರ್ ಮುಂದುವರಿದಿದೆ.