ಸಿಐಎ ಗೆ ಆಧಾರ್‌ ಮಾಹಿತಿ: ವಿಕಿಲೀಕ್ಸ್‌ ಆರೋಪ ತಿರಸ್ಕರಿಸಿದ ಕೇಂದ್ರ ಸರ್ಕಾರ

ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಭಾರತೀಯರ ಆಧಾರ್‌ ಮಾಹಿತಿಗಳನ್ನು ರಹಸ್ಯವಾಗಿ ಪಡೆಯುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಭಾರತೀಯರ ಆಧಾರ್‌ ಮಾಹಿತಿಗಳನ್ನು ರಹಸ್ಯವಾಗಿ ಪಡೆಯುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಆಧಾರ್ ದತ್ತಾಂಶ ಸೋರಿಕೆ ಸಂಬಂಧ ವಿಕಿಲೀಕ್ಸ್‌ ಹೇಳಿಕೆಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿ ಇದೊಂದು ಕುಚೋದ್ಯದ ಹೇಳಿಕೆ ಎಂದು ಕಿಡಿಕಾರಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ  ಅಧಿಕಾರಿಯೊಬ್ಬರು ಇದು ವಿಕಿಲೀಕ್ಸ್ ನ ವರದಿಯಲ್ಲ. ಬದಲಿಗೆ ಖಾಸಗಿ ವೆಬ್ ಸೈಟ್ ವೊಂದರ ವರದಿಯಾಗಿದೆ. ಆಧಾರ್ ಗಾಗಿ ಪಡೆಯಲಾಗುವ ದತ್ತಾಂಶಗಳು ಬಯೋ ಮೆಟ್ರಿಕ್ ಸಾಧನಗಳ ಮೂಲಕ ಪಡೆಯಲಾಗುತ್ತದೆ. ಹೀಗೆ  ಪಡೆಯಲದಾ ದತ್ತಾಂಶಗಳು ಯಾವುದೇ ಖಾಸಗಿ ಸಂಸ್ಥೆಯ ಸರ್ವರ್ ಗಳಿಗೆ ರವಾನೆಯಾಗುವುದಿಲ್ಲ. ಬದಲಿಗೆ ಆಧಾರ್ ಸರ್ವರ್ ಗಳಿಗೆ ರವಾನೆಯಾಗುತ್ತದೆ. ಅಷ್ಟೇ ಅಲ್ಲದೆ ಅವುಗಳನ್ನು ನಕಲು ಮಾಡಲಾಗದಂತೆ ಎನ್ ಸ್ಕ್ರಿಪ್ಟ್  ಮಾಡಲಾಗುತ್ತದೆ. ಹೀಗಾಗಿ ಈ ದತ್ತಾಂಶಗಳನ್ನೂ ಬೇರಾವುದೇ ಸಂಸ್ಥೆಗಳು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೆಲ ಸುದ್ದಿ ವೆಬ್ ಸೈಟ್ ಗಳಲ್ಲಿ ಅಮೆರಿಕದ ಸಿಐಎ ಸಂಸ್ಥೆ ಭಾರತೀಯ ಪ್ರಜೆಗಳ ಆಧಾರ್ ಮಾಹಿತಿಯನ್ನು ವ್ಯವಸ್ಥಿತವಾಗಿ ಪಡೆಯುತ್ತಿದೆ ಎಂದು ಆರೋಪಿಸಿತ್ತು. ಅಲ್ಲದೆ ಸಿಐಎ ಕೆಲ ನಿರ್ದಿಷ್ಟ ಪರಿಕರಗಳ ಮೂಲಕ  ಆಧಾರ್ ಮಾಹಿತಿ ಪಡೆಯುತ್ತಿದೆ ಎಂದು ಹೇಳಲಾಗಿತ್ತು. ಸೈಬರ್‌ ಗೂಢಚರ್ಯೆ ನಡೆಸಲು ಅಮೆರಿಕದ ಕ್ರಾಸ್‌ ಮ್ಯಾಚ್‌ ಟೆಕ್ನಾಲಜೀಸ್‌ ವಿನ್ಯಾಸಗೊಳಿಸಿರುವ ಎಕ್ಸ್‌ಪ್ರೆಸ್‌ ಲೇನ್‌ ಎಂಬ ಸಲಕರಣೆಯನ್ನು ಬಳಸಿಕೊಂಡು ಸಿಐಎ,  ಆಧಾರ್‌ ಮಾಹಿತಿ ಕಣಜಕ್ಕೆ ಕೈಹಾಕಿದೆ ಎಂದು ಹೇಳಲಾಗಿತ್ತು.

ಇನ್ನೊಂದು ದಾಖಲೆ ಪತ್ರದಲ್ಲಿ, "ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಅಮೆರಿಕದ ಕ್ರಾಸ್‌ ಮ್ಯಾಚ್‌ ಟೆಕ್ನಾಲಜೀಸ್‌ಗೆ ಪೂರೈಕೆ ಆದೇಶವನ್ನು ಸಲ್ಲಿಸುವ ಮುನ್ನ ಆ ಸಂಸ್ಥೆಯ ಪೂರ್ವಾಪರಗಳನ್ನು, ವೃತ್ತಿಪರತೆಯನ್ನು ಹಾಗೂ  ಅದರ ಖಾಸಗಿ ಸಾಂಗತ್ಯವನ್ನು ಪರಿಶೀಲಿಸುವ ಗೋಜಿಗೇ ಹೋಗಿರಲಿಲ್ಲ' ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

ಆಧಾರ್‌ ಕಾರ್ಯಕ್ರಮಕ್ಕಾಗಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ಸರ್ಟಿಫೈ ಮಾಡಿದ್ದ ಬಯೋಮೆಟ್ರಿಕ್‌ ಉಪಕರಣಗಳನ್ನು, ಬಯೋಮೆಟ್ರಿಕ್‌ ಸಾಫ್ಟ್ ವೇರ್‌ನಲ್ಲಿ ಪರಿಣತಿ ಹೊಂದಿರುವ ಅಮೆರಿಕದ ಕ್ರಾಸ್‌ ಮ್ಯಾಚ್‌  ಟೆಕ್ನಾಲಜೀಸ್‌ ಸಂಸ್ಥೆ ಪೂರೈಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com