ಜಮ್ಮು-ಕಾಶ್ಮೀರ: ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ- 5 ನಾಗರೀಕರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಪರಿಣಾಮ ಮಹಿಳೆಯರು ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು ಐವರು ನಾಗರೀಕರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಪರಿಣಾಮ ಮಹಿಳೆಯರು ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು ಐವರು ನಾಗರೀಕರು ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ. 

ಪೂಂಚ್ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಭಾರತೀಯ ಸೇನಾ ನೆಲೆಗಳು ಹಾಗೂ ಶಹ್ಪುರ ಸೆಕ್ಟರ್ ಬಳಿಯಿರುವ ಗ್ರಾಮಗಳಲ್ಲಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಕದನ ವಿರಾಮ ಉಲ್ಲಂಘನೆ ಮಾಡಿತ್ತು. 45 ನಿಮಿಷಗಳ ಕಾಲ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪಾಕಿಸ್ತಾನ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡು ಹಾಗೂ ಶೆಲ್ ಗಳ ದಾಳಿಗೆ ಐವರು ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೂಂಚ್ ಜಿಲ್ಲಾ ಅಭಿವೃದ್ಧಿ ಆಯುಕ್ತ ತರಿಖ್ ಅಹ್ಮದ್ ಜರ್ಗರ್ ಅವರು ಹೇಳಿದ್ದಾರೆ. 

ಗಾಯಾಳುಗಳನ್ನು ಜಮೀಲ್ ಅಹ್ಮದ್ (45), ಪರ್ವೈಜಾ ಅಖ್ತರ್ (20). ಮೊಹಮ್ಮದ್ ಸಫಿರ್ (10), ಜಾವೈದ್ ಹುಸೇನ್ (24), ಮೊಹಮ್ಮದ್ ಖಾಸೀಮ್ (14) ಎಂದು ಗುರ್ತಿಸಲಾಗಿದೆ. 

ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಸ್ತುತ ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ವಾತಾವರಣ ಶಾಂತಿಯುತವಾಗಿದ್ದು, ಯಾವುದೇ ರೀತಿಯ ಗುಂಡಿನ ಚಕಮಕಿಗಳು ನಡೆಯುತ್ತಿಲ್ಲ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com