ಒಡಿಶಾದಲ್ಲೊಬ್ಬ ಕಲಿಯುಗದ ಶ್ರವಣಕುಮಾರ: ನ್ಯಾಯಕ್ಕಾಗಿ ಪೋಷಕರನ್ನು ಹೆಗಲ ಮೇಲೆ ಹೊತ್ತು ಹೊರಟ ಕುವರ

ಆದಿವಾಸಿ ಜನಾಂಗದ ವಿದ್ಯಾವಂತ ಯುವಕನೋರ್ವ ನ್ಯಾಯ ಕೇಳಲು ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗಾಡುತ್ತಿದ್ದಾನೆ...
ಪೋಷಕರನ್ನು ಹೆಗಲ ಮೇಲೆ ಹೊತ್ತು ತಿರುಗುತ್ತಿರುವ ಕಾರ್ತಿಕ್
ಪೋಷಕರನ್ನು ಹೆಗಲ ಮೇಲೆ ಹೊತ್ತು ತಿರುಗುತ್ತಿರುವ ಕಾರ್ತಿಕ್
ಮಯೂರ್‌‌ಭಂಜ್‌‌: ಆದಿವಾಸಿ ಜನಾಂಗದ ವಿದ್ಯಾವಂತ ಯುವಕನೋರ್ವ ನ್ಯಾಯ ಕೇಳಲು ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗಾಡುತ್ತಿದ್ದಾನೆ.
ಒಡಿಶಾದ ಮಯೂರ್‌‌ಭಂಜ್‌  ಜಿಲ್ಲೆಯ ಮೊರೋದಾ ಗ್ರಾಮದ ಕಾರ್ತಿಕ್ ಸಿಂಗ್‌ ಎಂಬಾತ ತನ್ನ ವೃದ್ಧ ತಂದೆ-ತಾಯಿಯನ್ನು ಹೆಗಲ ಹೊತ್ತುಕೊಂಡು ತಿರುಗುತ್ತಿರುವ ಯುವಕ. 
ಇಲ್ಲಿನ ಮೊರೋದಾ ಠಾಣೆ ಪೊಲೀಸರು ತನ್ನ ವಿರುದ್ಧ 'ಸುಳ್ಳು ಕೇಸ್‌' ದಾಖಲಿಸಿ, 2009ರಲ್ಲಿ 18 ದಿನ ಜೈಲಿನಲ್ಲಿ ಇಟ್ಟಿದ್ದರು ಎಂದು ಕಾರ್ತಿಕ್‌ ಸಿಂಗ್‌ ಆರೋಪಿಸಿದ್ದಾನೆ. 
ತಾನು ಜೈಲಿಗೆ ಹೋಗಿ ಬಂದ ಪರಿಣಾಮ ಗ್ರಾಮಸ್ಥರು ತನಗೆ ಬಹಿಷ್ಕಾರ ಹಾಕಿದ್ದಾರೆ. ದುಡಿಯಲು ಯಾವುದೇ ಕೆಲಸವನ್ನೂ ಗ್ರಾಮಸ್ಥರು ನೀಡುತ್ತಿಲ್ಲ. ಇದರಿಂದ ತನಗೆ ಯಾವುದೇ ಆದಾಯ ಮೂಲ ಇಲ್ಲದಂತಾಗಿದೆ. ಇದರಿಂದ ಪೊಲೀಸರ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ತಾನು ಅಸಹಾಯಕನಾಗಿದ್ದು, ನ್ಯಾಯಕ್ಕಾಗಿ ತನ್ನ ತಂದೆ-ತಾಯಿಯನ್ನು ಹೆಗಲಿಗೆ ಕಟ್ಟಿಕೊಂಡು ಹೋರಾಡುತ್ತಿರುವುದಾಗಿ ಕಾರ್ತಿಕ್‌ ಸಿಂಗ್‌ ಹೇಳಿಕೊಂಡಿದ್ದಾನೆ.
ಈವರೆಗೆ ಕಾರ್ತಿಕ್‌ ಸಿಂಗ್‌ ತನ್ನ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು 40 ಕಿ.ಮೀ ನಡೆದಿದ್ದಾನೆ.  ತಾನು ವಿದ್ಯಾವಂತನಾಗಿದ್ದು, ಸಾಮಾಜಿಕ ಬಹಿಷ್ಕಾರದ ಆಧಾರದ ಮೇಲೆ ತನಗೆ ಉದ್ಯೋಗ ನೀಡುವಂತೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದು,  ಜಿಲ್ಲಾಧಿಕಾರಿಗಳಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದೂ ಕಾರ್ತಿಕ್‌ ಸಿಂಗ್‌ ತಿಳಿಸಿದ್ದಾನೆ. 
ತಾನು ಯಾವುದೇ ತಪ್ಪು ಮಾಡಿಲ್ಲ, ನಿರಪರಾಧಿ ಎಂದು ಸಾಬೀತು ಪಡಿಸಬೇಕು, ನನ್ನ ಪೋಷಕರು ಕಣ್ಣು ಮುಚ್ಚುವ ಮೊದಲು ನಾನು ಈ ಕೆಲಸ ಮಾಡಬೇಕೆಂದು ಆತ ಹೇಳಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com