ಮುಂಬೈ: ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ಶ್ರೇಣಿಯ ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು.
ಮುಂಬೈನ ಮಜಗಾಂವ್ ಹಡಗುಕಟ್ಟೆ(ಎಂಡಿಎಲ್)ಯಲ್ಲಿ ಮೋದಿ ಕಲ್ವರಿಯನ್ನು ದೇಶಕ್ಕೆ ಅರ್ಪಣೆ ಮಾಡಿದರು. ಐಎನ್ಎಸ್ ಕಲ್ವರಿ ನೌಕೆಗೆ ಸೇರ್ಪಡೆಗೊಂಡಿರುವುದರಿಂದ ಭಾರತದ ನೌಕಾದಳದ ಸಾಮರ್ಥ್ಯ ಇನ್ನಷ್ಟು ಹೆಚ್ಚಾಗಲಿದೆ. ಮಾತ್ರವಲ್ಲದೆ ನಮ್ಮ ಸಮುದ್ರ ತಟವನ್ನು ಸುರಕ್ಷಿತವಾಗಿಡಲಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಆಧಿಪತ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾ ಹಿಂದು ಮಹಾಸಾಗರದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಈ ಹೊತ್ತಿನಲ್ಲೇ ಐಎನ್ಎಸ್ ಕಲ್ವರಿ ದೇಶ ಸೇವೆಗೆ ಲೋಕಾರ್ಪಣೆಗೊಂಡಿರುವುದು ನೌಕಾ ದಳಕ್ಕೆ ಆನೆ ಬಲ ಬಂದಂತಾಗಿದೆ.
ಐಎನ್ಎಸ್ ಕಲ್ವರಿ ಜಲಾಂತರ್ಗಾಮಿ ನೌಕೆಯನ್ನು ಫ್ರೆಂಚ್ ನಾವೆಲ್ ಡಿಫೆನ್ಸ್ ಆಂಡ್ ಎನರ್ಜಿ ಕಂಪನಿ ಡಿಸಿಎನ್ಎಸ್ ವಿನ್ಯಾಸಗೊಳಿಸಿದ್ದು ಮಝಗೋನ್ ಡಾಕ್ ಲಿಮಿಟೆಡ್ ನಿರ್ಮಾಣ ಮಾಡಿದೆ.