14 ದಿನಗಳ ಚಳಿಗಾಲದ ಸಂಸತ್ ಅಧಿವೇಶನ ಆರಂಭ

14 ದಿನಗಳ ಚಳಿಗಾಲದ ಅಧಿವೇಶನ ದೆಹಲಿಯ ಸಂಸತ್ ಭವನದಲ್ಲಿ ಶುಕ್ರವಾರ ಆರಂಭವಾಗಿದ್ದು, ಸಂಸತ್ ಉದ್ದೇಶಿಸಿ ಮಾತನಾಡುವ ಮೂಲಕ ಪ್ರಧಾನಿ ಮೋದಿ ಅಧಿವೇಶನಕ್ಕೆ ಚಾಲನೆ ನೀಡಿದರು.
ಸಂಸತ್ ನಲ್ಲಿ ಪ್ರಧಾನಿ ಮೋದಿ
ಸಂಸತ್ ನಲ್ಲಿ ಪ್ರಧಾನಿ ಮೋದಿ
ನವದೆಹಲಿ: 14 ದಿನಗಳ ಚಳಿಗಾಲದ ಅಧಿವೇಶನ ದೆಹಲಿಯ ಸಂಸತ್ ಭವನದಲ್ಲಿ ಶುಕ್ರವಾರ ಆರಂಭವಾಗಿದ್ದು, ಸಂಸತ್ ಉದ್ದೇಶಿಸಿ ಮಾತನಾಡುವ ಮೂಲಕ ಪ್ರಧಾನಿ ಮೋದಿ ಅಧಿವೇಶನಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ಸಂಸತ್ ಭವನದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಸುಗಮ ಕಲಾಪ ನಡೆಯುವ ವಿಶ್ವಾಸವಿದೆ. ಸರ್ಕಾರದ ಎಲ್ಲ ಪ್ರಮುಖ ಕಾಯ್ದೆಗಳು ಹಾಗೂ ವಿಧೇಯಕಗಳನ್ನು ಮಂಡಿಸಲು  ಸಂಪೂರ್ಣ ಶ್ರಮವಹಿಸಲಾಗುತ್ತದೆ. ಅಂತೆಯೇ ಪ್ರತಿಪಕ್ಷಗಳಿಂದಲೂ ನಾವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ಈ ಬಾರಿ ಖಂಡಿತ ಕಲಾಪ ಯಶಸ್ವಿಯಾಗಲಿದೆ ಎಂದು ಹೇಳಿದರು.
ಅಂತೆಯೇ ಚಳಿಗಾಲದ ಅಧಿವೇಶನ ವಿಳಂಬದ ಕುರಿತು ಮಾತನಾಡಿ ಪ್ರಧಾನಿ ಮೋದಿ, ದೀಪಾವಳಿ ಸಂದರ್ಭದಲ್ಲೇ ಕಲಾಪ ಆರಂಭವಾಗಬೇಕಿತ್ತು. ಆದರೆ ಮಾಲಿನ್ಯ, ಚುನಾವಣೆ ಪರಿಣಾಮ ಅಧಿವೇಶನ ಬಲವಂತವಾಗಿ  ಮುಂದೂಡಲ್ಪಟ್ಟಿತ್ತು. ಆದರೆ ಇದೀಗ ಅಧಿವೇಶನ ಆರಂಭವಾಗಿದ್ದು ಅಡೆತಡೆಗಳಿಲ್ಲದೇ ಸುಗಮ ಕಲಾಪ ನಡೆಯುವ ವಿಶ್ವಾಸವಿದೆ. ಅಭಿವೃದ್ಧಿಗೆ ಪೂರಕವಾದ ಮತ್ತು ಸಕಾರಾತ್ಮಕ ಚರ್ಚೆಗಳು ನಡೆಯುವ ವಿಶ್ವಾಸವಿದೆ ಎಂದು  ಪ್ರಧಾನಿ ಮೋದಿ ಹೇಳಿದರು.
ಸರ್ಕಾರ ಪ್ರತಿಪಕ್ಷಗಳನ್ನು ಗೌರವಿಸಬೇಕು: ಕಾಂಗ್ರೆಸ್
ಇನ್ನು ಸಂಸತ್ ಅಧಿವೇಶನ ಸಂಬಂಧ ಕಾಂಗ್ರೆಸ್ ಪಕ್ಷ ಕೂಡ ಪ್ರತಿಕ್ರಿಯೆ ನೀಡಿದ್ದು, ಮೊದಲು ಕೇಂದ್ರ ಸರ್ಕಾರ ಪ್ರತಿಪಕ್ಷಗಳನ್ನು ಗೌರವಿಸಬೇಕು ಎಂದು ಹೇಳಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ  ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರು, ನಾವು ಯಾವಾಗಲೂ ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಲು ಮುಂದಾಗಿರುತ್ತೇವೆ. ನಮಗೂ ಕೂಡ ಸಂಸತ್ ಕಲಾಪ ಸುಗಮವಾಗಿ ನಡೆಯಬೇಕು ಎಂಬ  ಆಶಯವಿದೆ. ಸೂಕ್ತ ವಿಚಾರಗಳಿಗೆ ಸಂಬಂಧಿಸಿದಂತೆ ರಚನಾತ್ಮಕ ಮತ್ತು ತರ್ಕಬದ್ಧ ಚರ್ಚೆಗಳು ನಡೆಯಬೇಕು. ಆದರೆ ಸರ್ಕಾರದ ಕೆಲ ನಡೆಗಳು ಇದಕ್ಕೆ ವಿರುದ್ಧವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಕೂಡ ಆಸಕ್ತಿ ವಹಿಸಬೇಕು.  ಚರ್ಚೆಗೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com