ಇಂದಿರಾಗಾಂಧಿ ಸಾವು ನನ್ನ ಜೀವನದ ಧಿಕ್ಕನ್ನೇ ಬದಲಿಸಿತ್ತು: ಸೋನಿಯಾಗಾಂಧಿ

ಮಾಜಿ ಪ್ರಧಾನಿ ಹಾಗೂ ತಮ್ಮ ಅತ್ತೆ ಇಂದಿರಾಗಾಂಧಿ ಅವರ ಸಾವಿನ ಆಘಾತ ತಮ್ಮ ಜೀವನದ ದಿಕ್ಕನ್ನೇ ಬದಲಿಸಿತ್ತು ಎಂದು ಕಾಂಗ್ರೆಸ್ ಪಕ್ಷದ ನಿರ್ಗಮಿತ ಅಧ್ಯಕ್ಷರಾದ ಸೋನಿಯಾಗಾಂಧಿ ಹೇಳಿದರು.
ಸೋನಿಯಾಗಾಂಧಿ ಭಾಷಣ
ಸೋನಿಯಾಗಾಂಧಿ ಭಾಷಣ
ನವದೆಹಲಿ: ಮಾಜಿ ಪ್ರಧಾನಿ ಹಾಗೂ ತಮ್ಮ ಅತ್ತೆ ಇಂದಿರಾಗಾಂಧಿ ಅವರ ಸಾವಿನ ಆಘಾತ ತಮ್ಮ ಜೀವನದ ದಿಕ್ಕನ್ನೇ ಬದಲಿಸಿತ್ತು ಎಂದು ಕಾಂಗ್ರೆಸ್ ಪಕ್ಷದ ನಿರ್ಗಮಿತ ಅಧ್ಯಕ್ಷರಾದ ಸೋನಿಯಾಗಾಂಧಿ ಹೇಳಿದರು.
ದೆಹಲಿಯ ಅಕ್ಬರ್ ರೋಡ್‌ನಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿಯ ಹೊರಭಾಗದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅಧ್ಯಕ್ಷರಾಗಿ ತಮ್ಮ ಕೊನೆಯ ಭಾಷಣ ಮಾಡಿದ ಸೊನಿಯಾಗಾಂಧಿ ಅವರು, "ತಮ್ಮ ಹಳೆಯ ದಿನಗಳನ್ನು  ಮೆಲುಕು ಹಾಕಿದರು. ಈ ವೇಳೆ ತಮ್ಮ ಅತ್ತೆ ಇಂದಿರಾ ಗಾಂಧಿ ಅವರನ್ನು ನೆನೆದು ಭಾವುಕರಾದ ಸೋನಿಯಾ ಇಂದಿರಾ ಗಾಂಧಿ ಅವರ ಸಾವು ನನ್ನ ಜೀವನದ ದಿಕ್ಕನ್ನೇ ಬದಲಿಸಿತ್ತು. ಇಂದಿರಾ ಗಾಂಧಿ ಅವರಿಂದಲೇ ಭಾರತದ  ಕುರಿತು ಸಾಕಷ್ಟು ವಿಚಾರಗಳನ್ನು ಕಲಿತೆ. ಇಂದಿರಾ ನನ್ನನ್ನು ತಮ್ಮ ಸ್ವಂತ ಮಗಳಂತೆ ಕಾಣುತ್ತಿದ್ದರು. ಆದರೆ 1984ರಲ್ಲಿ ಅವರ ಹತ್ಯೆಯಾಗಿತ್ತು. ಅಂದು ನನಗೆ ನನ್ನ ಸ್ವಂತ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗಿತ್ತು".
ಅಂದು ನಾನು ನನ್ನ ಪತಿ ರಾಜೀವ್ ಮತ್ತು ಮಕ್ಕಳನ್ನು ರಾಜಕೀಯದಿಂದಲೇ ದೂರ ಇಡಲು ಸಾಕಷ್ಟು ಪ್ರಯಾಸ ಪಟ್ಟಿದ್ದೆ. ಆದರೆ ಅಂದು ಅನಿವಾರ್ಯತೆಯಿಂದಾಗಿ ರಾಜೀವ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಮುಂದಾಳತ್ವ  ವಹಿಸಿದರು. ಅಲ್ಲದೆ ಪ್ರಧಾನಿಯೂ ಆದರು. ಆದರೆ ಬಳಿಕ ಅವರನ್ನೂ ಹೀನಾಯವಾಗಿ ಕೊಲ್ಲಲಾಗಿತ್ತು. ಬಳಿಕ ದೇಶದಲ್ಲಿ ಕೋಮುವಾದಿ ಶಕ್ತಿಗಳು ಒಗ್ಗೂಡಿದ್ದವು. ಅಂದು ನಾನು ನಾನು ಮತ್ತು ನನ್ನ ಮಕ್ಕಳು ಧ್ವನಿ ಎತ್ತಬೇಕು  ಎಂದುಕೊಂಡೆ.. ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತ ಒಳಧನಿ ನನಗೆ ಕೇಳುತ್ತಿತ್ತು. ಅಂದೇ ನಾನು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಪರಂಪರೆಯನ್ನು ಮುಂದುವರೆಸಬೇಕು ಎಂಬ ದೃಢನಿರ್ಧಾರ ಕೈಗೊಂಡೆ. 
ಭಾರತ ದೇಶ ಯುವ ರಾಷ್ಟ್ರವಾಗಿದ್ದು, ಈಗ ನಮಗೆ ಯುವ ನಾಯಕತ್ವ ದೊರೆತಿದೆ. ರಾಹುಲ್ ಗಾಂಧಿ ನನ್ನ ಮಗ ಎಂಬ ಒಂದೇ ಕಾರಣಕ್ಕೆ ಈತ ಇಂದು ಈ ಸ್ಥಾನಕ್ಕೇರಿಲ್ಲ. ಈಗ ರಾಹುಲ್ ಒಂದು ರಾಜಕೀಯ ಶಕ್ತಿಯಾಗಿ ಬೆಳೆದಿದ್ದು,  ಆತನ ನಾಯಕತ್ವದಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸೋನಿಯಾ ಹೇಳಿದರು. ಅಂತೆಯೇ ರಾಹುಲ್ ಗಾಂಧಿ ವಿರುದ್ಧದ ವಾಗ್ದಾಳಿ ಕುರಿತು ಮಾತನಾಡಿದ ಸೋನಿಯಾ, ಆತನ ವಿರುದ್ಧ ಪ್ರತೀ ದಾಳಿ ಕೂಡ ಆತನನ್ನು  ಬಲಶಾಲಿಯನ್ನಾಗಿಸುತ್ತದೆ. ಅತ ಮತ್ತಷ್ಟು ಸಮರ್ಥನಾಗುತ್ತಾ ಸಾಗುತ್ತಾನೆ ಎಂಬ ವಿಶ್ವಾಸ ತಮಗಿದೆ. 
ಇಂದು ಭಾರತದ ಮೂಲಭೂತ ಮೌಲ್ಯಗಳು ನಿತ್ಯದಾಳಿಗೊಳಗಾಗುತ್ತಿವೆ. ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಉತ್ತರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಾಗಬೇಕಿದೆ ಮತ್ತು ಯಾವುದೇ ರೀತಿಯ ತ್ಯಾಗಕ್ಕೂ  ಸಿದ್ಧವಾಗಬೇಕಿದೆ. ನನ್ನ ಅಧ್ಯಕ್ಷತೆಯ ಆರಂಭಿಕ ವರ್ಷಗಳಲ್ಲಿ ನಾವು ಭಾರತೀಯ ಸಂವಿಧಾನ ರಕ್ಷಣೆ ಹಾಗೂ ಮೌಲ್ಯಗಳ ರಕ್ಷಣೆಗಾಗಿ ಜವಾಬ್ದಾರಿಯುತ  ಮತ್ತು ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಿದ್ದೆವು. ಬಳಿಕ ನಾವು  ಕೇಂದ್ರದಲ್ಲಿ ಅಧಿಕಾರ ರಚಿಸಿದ್ದೆವು. ಆಗ ನಾವು ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರ ರಚಿಸಿದ್ದೆವು. ಹೀಗಿದ್ದರೂ ನಮ್ಮ ಮೌಲ್ಯಗಳನ್ನು ನಾವು ಕಳೆದುಕೊಂಡಿರಲಿಲ್ಲ. ಪ್ರಜಾ ಪ್ರಭುತ್ವದ ಮೇಲಿನ ನಂಬಿಕೆ  ಕಳೆದುಕೊಂಡಿರಲಿಲ್ಲ. ಬಳಿಕ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ 10 ವರ್ಷಗಳ ಜನಪರ ಸರ್ಕಾರವನ್ನು ನೀಡಿದ್ದೆವು. ದೇಶದಲ್ಲಿ ನಾಗರಿಕ ಆಹಾರ ಹಕ್ಕು, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕುಗಳು ಸೇರಿದಂತೆ ಬಡವರಿಗಾಗಿ  ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೆವು. 
ಪ್ರಿಯ ಕಾಂಗ್ರೆಸ್ ಕಾರ್ಯಕರ್ತ ನೀವು ಕೇವಲ ನಮ್ಮ ಸಹೋದ್ಯೋಗಿಗಳಷ್ಟೇ ಅಲ್ಲ.. ನೀವೇ ನಮ್ಮ ಮಾರ್ಗದರ್ಶಕರಾಗಿದ್ದೀರಿ...ಪಕ್ಷದ ಅಧ್ಯಕ್ಷೆಯಾಗಿ ಇದು ನನ್ನ ಕೊನೆಯ ಭಾಷಣವಾಗಿದ್ದು, ಹೊಸ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ  ಮತ್ತಷ್ಟು ಪ್ರಬಲವಾಗಲಿದೆ ಎಂಬ ವಿಶ್ವಾಸವಿದೆ ಎಂದು ಸೋನಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com