ಹೈದರಾಬಾದ್: ಹೈದರಾಬಾದ್ ಉತ್ತರ ವಲಯ ಟಾಸ್ಕ್ ಫೋರ್ಸ್ ಪೊಲೀಸರು ಭಾನುವಾರ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿದ್ದು, ಇಬ್ಬರು ನಟಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.
ಸ್ಥಳೀಯ ಪೊಲೀಸರ ಮಾಹಿತಿಯನ್ನು ಆಧರಿಸಿ ನಗರದ ತಾಜ್ ಡೆಕ್ಕನ್ ಹೋಟೆಲ್ ನ ರೂಮ್ ಮೇಲೆ ದಾಳಿ ನಡೆಸಿ ಓರ್ವ ಟಾಲಿವುಡ್ ನಟಿ ಮತ್ತು ಡಿಸೈನರ್ ಹಾಗೂ ಬೆಂಗಾಲಿ ಕಿರುತೆರೆ ನಟಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯ ಟಾಸ್ಕ್ ಫೋರ್ಸ್ ಇನ್ಸ್ ಪೆಕ್ಟರ್ ನಾಗೇಶ್ವರ್ ರಾವ್ ಅವರು ಹೇಳಿದ್ದಾರೆ.
ತಾಜ್ ಡೆಕ್ಕನ್ ಹೋಟೆಲ್ ಮಾಲೀಕನನ್ನು ಸಹ ಬಂಧಿಸಲಾಗಿದ್ದು, ಆತನಿಂದ 55 ಸಾವಿರ ರುಪಾಯಿ ನಗದು ಹಾಗೂ ಮೊಬೈಲ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೈಟೆಕ್ ವೇಶ್ಯಾವಾಟಿಕೆಯನ್ನು ಆಯೋಜಿಸುತ್ತಿದ್ದ ಜನಾರ್ಧನ್ ಎಂಬ ವ್ಯಕ್ತಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ ಎಂದಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಬಂಜಾರ ಹಿಲ್ಸ್ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ನಾಗೇಶ್ವರ್ ರಾವ್ ಅವರು ಹೇಳಿದ್ದಾರೆ.